ಉತ್ತರಾಖಂಡ | ಅಲ್ಮೋರಾದಲ್ಲಿ ಶಾಲೆ ಬಳಿ 160ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳು ಪತ್ತೆ, ಪೊಲೀಸರಿಂದ ತನಿಖೆ

Photo credit: ITG
ಡೆಹ್ರಾಡೂನ್ : ಉತ್ತರಾಖಂಡ ಪೊಲೀಸರು ಅಲ್ಮೋರಾದ ಸರಕಾರಿ ಶಾಲೆಯ ಬಳಿಯಿಂದ 161 ಪ್ರಬಲ ಸ್ಫೋಟಕ ವಸ್ತುವಾದ ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕುರಿತು ವಿವರವಾದ ತನಿಖೆ ನಡೆಯುತ್ತಿದೆ.
ದಾಬ್ರಾ ಗ್ರಾಮದ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರು ಮಕ್ಕಳು ಆಟವಾಡುತ್ತಿರುವಾಗ ಹತ್ತಿರದ ಪೊದೆಗಳಲ್ಲಿ ಅನುಮಾನಾಸ್ಪದ ವಸ್ತು ಕಂಡು ಬಂದ ಹಿನ್ನೆಲೆ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದಾಗ ಜಿಲೆಟಿನ್ ಕಡ್ಡಿಗಳಿರುವುದು ಕಂಡು ಬಂದಿದೆ.
ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದ ತಂಡಗಳು ವಿವರವಾದ ಶೋಧ ನಡೆಸಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ. ಈ ಕುರಿತು ಪೊಲೀಸರು ಸ್ಫೋಟಕ ಕಾಯ್ದೆಯಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅಲ್ಮೋರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಪಿಂಚ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ. ಸಾರ್ವಜನಿಕರು ವದಂತಿಗಳನ್ನು ನಂಬಬೇಡಿ ಎಂದು ಹೇಳಿದರು.
"ದಾಬ್ರಾ ಗ್ರಾಮದಲ್ಲಿ, ಶಾಲೆಯ ಬಳಿಯ ಪೊದೆಯಲ್ಲಿ ಸುಮಾರು 161 ಜಿಲೆಟಿನ್ ಕಡ್ಡಿಗಳು ಕಂಡುಬಂದಿವೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.







