2024ರಲ್ಲಿ ಭಾರತೀಯ ಪೌರತ್ವ ತೊರೆದ 2 ಲಕ್ಷಕ್ಕೂ ಅಧಿಕ ಮಂದಿ: ಕೇಂದ್ರ ಸರ್ಕಾರ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: 2024ರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಭಾರತೀಯ ಪೌರತ್ವ ತೊರೆದಿದ್ದಾರೆ ಎಂದು ಶುಕ್ರವಾರ ಕೇಂದ್ರ ಸರಕಾರ ಲೋಕಸಭೆಗೆ ಮಾಹಿತಿ ನೀಡಿದೆ.
ಈ ಕುರಿತು ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಕೇಳಿದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಮೇಲಿನಂತೆ ಲಿಖಿತ ಉತ್ತರ ನೀಡಿದ್ದಾರೆ.
“ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 2020ರಲ್ಲಿ 85,256 ಮಂದಿ, 2021ರಲ್ಲಿ 1,63,370 ಮಂದಿ, 2022ರಲ್ಲಿ 2,25,620 ಮಂದಿ, 2023ರಲ್ಲಿ 2,16,219 ಮಂದಿ ಹಾಗೂ 2024ರಲ್ಲಿ 2,06,378 ಮಂದಿ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ” ಎಂದು ಅವರು ಮಾಹಿತಿ ನೀಡಿದ್ದಾರೆ.
ಇದಲ್ಲದೆ, “2011ರಲ್ಲಿ 1,22,819 ಮಂದಿ, 2012ರಲ್ಲಿ 1,20,923 ಮಂದಿ, 2013ರಲ್ಲಿ 1,31,405 ಮಂದಿ ಹಾಗೂ 2014ರಲ್ಲಿ 1,29,328 ಮಂದಿ ಭಾರತೀಯ ಪೌರತ್ವ ತೊರೆದಿದ್ದರು” ಎಂದು ಅವರು ತಿಳಿಸಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಲಭ್ಯವಿರುವ ದತ್ತಾಂಶದ ಪ್ರಕಾರ, ಒಟ್ಟಾರೆ 3,43,56,193 ಮಂದಿ ಭಾರತೀಯರು ವಿದೇಶಗಳಲ್ಲಿ ನೆಲೆಸಿದ್ದಾರೆ.
ಭಾರತೀಯ ಪೌರತ್ವವನ್ನು ತೊರೆದು, ವಿದೇಶಿ ಪೌರತ್ವ ಪಡೆಯಲು ಕಾರಣ ವೈಯಕ್ತಿಕವಾಗಿದ್ದು, ಅದರ ಕಾರಣ ಸಂಬಂಧಿಸಿದ ವ್ಯಕ್ತಿಗಳಿಗೆ ಮಾತ್ರ ತಿಳಿದಿದೆ ಎಂದೂ ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.







