ದೇಶದಲ್ಲಿ ಪ್ರತಿವರ್ಷ 20 ಲಕ್ಷಕ್ಕೂ ಅಧಿಕ ಸುಟ್ಟ ಗಾಯಾಳುಗಳು: ವರದಿ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ದೇಶದಲ್ಲಿ ವಾರ್ಷಿಕ ಅಂದಾಜು 20 ಲಕ್ಷಕ್ಕೂ ಅಧಿಕ ಜನರು ಸುಟ್ಟು ಗಾಯಗಳಿಂದ ಸಂತ್ರಸ್ತರಾಗುತ್ತಿದ್ದಾರೆ. 25 ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.
ಸುಟ್ಟ ಗಾಯಗಳಿಂದ ಬದುಕುಳಿದವರು ಪೀಡನೆ, ಕೀಟಲೆ, ಅಪಹಾಸ್ಯ, ಅವಹೇಳನ ಮತ್ತು ಹಣೆಪಟ್ಟಿ ಕಟ್ಟುವಿಕೆಯ ರೂಪದಲ್ಲಿ ಮಾತ್ರ ಸಾಮಾಜಿಕ ಕಳಂಕವನ್ನು ಎದುರಿಸುತ್ತಿಲ್ಲ. ಬದಲಾಗಿ ಭಾರತೀಯ ಆರೋಗ್ಯ ಸೇವಾ ಸಂಸ್ಥೆಗಳು ಹಾಗೂ ಆರೋಗ್ಯ ಸೇವೆ ಪೂರೈಕೆದಾರರಿಂದ ಕೂಡ ದಿನನಿತ್ಯ ತಾರತಮ್ಯಕ್ಕೆ ಗುರಿಯಾಗುತ್ತಿದ್ದಾರೆ ಎಂದು ಇತ್ತೀಚೆಗಿನ ಅಧ್ಯಯನವೊಂದು ತಿಳಿಸಿದೆ.
ಸಹಾನುಭೂತಿಯ ಕೊರತೆ ಹಾಗೂ ಕೆಲವೊಮ್ಮೆ ಆರೋಗ್ಯ ಸೇವೆಯ ವೃತ್ತಿಪರರಿಂದ ಕಿರುಕುಳಕ್ಕೊಳಗಾಗುವುದು ಅವರನ್ನು ಭಾವನಾತ್ಮಕ, ದೈಹಿಕ ಹಾಗೂ ಮಾನಸಿಕವಾಗಿ ಕುಸಿಯುವಂತೆ ಮಾಡುತ್ತದೆ. ಮುಖ್ಯವಾಗಿ, ಗೋಚರಿಸುವ ವಿರೂಪ ಅಥವಾ ಅಂಗವೈಕಲ್ಯ ಹೊಂದಿರುವವರು ಹಾಗೂ ಹಿಂದುಳಿದ ಹಿನ್ನೆಲೆಯ ರೋಗಿಗಳು ಈ ಸವಾಲನ್ನು ಎದುರಿಸುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.
‘ಸಯನ್ಸ್ ಡೈರೆಕ್ಟ್ ಬರ್ನ್ಸ್ ಜರ್ನಲ್’ನಲ್ಲಿ ಪ್ರಕಟವಾದ ಈ ಅಧ್ಯಯನ, ಸಾಂಸ್ಥಿಕ ನಿರ್ಲಕ್ಷ್ಯ, ಕಡಿಮೆ ಸಂಪನ್ಮೂಲ ಸೌಲಭ್ಯ, ಸಿಬ್ಬಂದಿಯ ಅಧಿಕ ಕೆಲಸದ ಒತ್ತಡ ಹಾಗೂ ಭಾರತದ ಆರೋಗ್ಯ ಸೌಲಭ್ಯಗಳಲ್ಲಿನ ವೈಫಲ್ಯಗಳು ಸುಟ್ಟ ಗಾಯದ ರೋಗಿಗಳು ತಾರತಮ್ಯ ಎದುರಿಸಲು ಹಾಗೂ ಕಡಿಮೆ ಗುಣಮಟ್ಟದ ಆರೈಕೆಯನ್ನು ಪಡೆಯಲು ಕೆಲವು ಕಾರಣಗಳಾಗಿವೆ ಎಂದು ಹೇಳಿದೆ.
ಭಾರತದ ‘ದಿ ಜಾರ್ಜ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್’ ಈ ಅಧ್ಯಯನ ನಡೆಸಿದೆ. ವೈದ್ಯಕೀಯ ಕ್ಷೇತ್ರದ ಸುಧಾರಣೆಯು ಬದುಕುಳಿಯುವ ಸುಟ್ಟ ಗಾಯದ ರೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಆದರೆ, ಸುಟ್ಟ ಗಾಯದ ರೋಗಿಗಳ ಮೇಲಿನ ದೀರ್ಘಕಾಲೀನ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಪರಿಣಾಮಗಳ ಕುರಿತು ಗಮನ ಹರಿಸಬೇಕಾದ ಅಗತ್ಯತೆ ಇದೆ ಎಂದು ಅದು ಹೇಳಿದೆ.







