‘ಆಪರೇಷನ್ ಸಿಂಧೂರ’ ಬಳಿಕ ಭಾರತದಲ್ಲಿ 8,000ಕ್ಕೂ ಅಧಿಕ ಎಕ್ಸ್ ಖಾತೆಗಳು ಸ್ಥಗಿತ

PC : X
ಹೊಸದಿಲ್ಲಿ: ಕೇಂದ್ರ ಸರಕಾರದ ಆದೇಶದ ಬಳಿಕ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಭಾರತದಲ್ಲಿ 8,000ಕ್ಕೂ ಅಧಿಕ ಖಾತೆಗಳನ್ನು ಸ್ಥಗಿತಗೊಳಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ‘ಆಪರೇಷನ್ ಸಿಂಧೂರ’ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಈ ಕ್ರಮವನ್ನು ತೆಗದುಕೊಳ್ಳಲಾಗಿದೆ.
ಭಾರತದಲ್ಲಿಯ 8,000ಕ್ಕೂ ಅಧಿಕ ಖಾತೆಗಳನ್ನು ನಿರ್ಬಂಧಿಸುವಂತೆ ಭಾರತ ಸರಕಾರದಿಂದ ಕಾರ್ಯಕಾರಿ ಆದೇಶಗಳನ್ನು ಎಕ್ಸ್ ಸ್ವೀಕರಿಸಿದೆ. ಆದೇಶಗಳನ್ನು ಪಾಲಿಸದಿದ್ದರೆ ಗಣನೀಯ ದಂಡ ಮತ್ತು ಕಂಪನಿಯ ಸ್ಥಳೀಯ ಉದ್ಯೋಗಿಗಳ ಬಂಧನ ಸೇರಿದಂತೆ ಕಠಿಣ ಕ್ರಮಗಳ ಎಚ್ಚರಿಕೆ ನೀಡಲಾಗಿದೆ. ಅಂತರರಾಷ್ಟ್ರೀಯ ಸುದ್ದಿಸಂಸ್ಥೆಗಳು ಮತ್ತು ಪ್ರಮುಖ ಎಕ್ಸ್ ಬಳಕೆದಾರರ ಖಾತೆಗಳಿಗೆ ಭಾರತದಲ್ಲಿ ಪ್ರವೇಶವನ್ನು ನಿರ್ಬಂಧಿಸುವಂತೆ ಆದೇಶಗಳಲ್ಲಿ ಸೂಚಿಸಲಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಭಾರತ ಸರಕಾರವು ಯಾವ ಖಾತೆಯಿಂದ ಯಾವ ಪೋಸ್ಟ್ಗಳು ಭಾರತದ ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸಿವೆ ಎನ್ನುವುದನ್ನು ನಿರ್ದಿಷ್ಟ ಪಡಿಸಿಲ್ಲ ಎಂದು ಕಂಪನಿಯು ತನ್ನ ಪೋಸ್ಟ್ನಲ್ಲಿ ತಿಳಿಸಿದೆ.
ಆದೇಶಗಳನ್ನು ಪಾಲಿಸಲು ಭಾರತದಲ್ಲಿ ಮಾತ್ರ ಈ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಎಕ್ಸ್ ತಿಳಿಸಿದೆ.
ಸರಕಾರದ ಆದೇಶಗಳ ಬಗ್ಗೆ ತನಗೆ ಅಸಮಾಧಾನವಿದೆ ಎಂದು ಒತ್ತಿ ಹೇಳಿರುವ ಎಕ್ಸ್,ಇಡೀ ಖಾತೆಗಳನ್ನು ನಿರ್ಬಂಧಿಸುವುದು ಅನಗತ್ಯ ಮಾತ್ರವಲ್ಲ,ಅದು ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದಲ್ಲಿಯ ಕಂಟೆಂಟ್ನ ಸೆನ್ಸಾರ್ಶಿಪ್ ಗೆ ಸಮವಾಗುತ್ತದೆ ಮತ್ತು ವಾಕ್ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ವಿರುದ್ಧವಾಗಿದೆ. ಇದು ಸುಲಭದ ನಿರ್ಧಾರವಲ್ಲ,ಆದಾಗ್ಯೂ ಭಾರತದಲ್ಲಿ ವೇದಿಕೆಯನ್ನು ಲಭ್ಯವಾಗಿಸುವುದು ಭಾರತೀಯರು ಮಾಹಿತಿಗಳನ್ನು ಪಡೆದುಕೊಳ್ಳಲು ಅಗತ್ಯವಾಗಿರುವುದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಕಾನೂನು ನಿರ್ಬಂಧಗಳಿಂದಾಗಿ ಸರಕಾರದ ಆದೇಶಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ ಮತ್ತು ಲಭ್ಯವಿರುವ ಎಲ್ಲ ಕಾನೂನು ಪರಿಹಾರಗಳನ್ನು ತಾನು ಅನ್ವೇಷಿಸುತ್ತಿದ್ದೇನೆ ಎಂದೂ ಎಕ್ಸ್ ತಿಳಿಸಿದೆ.