ಹಿಜಾಬ್ ಧಾರಿ ಮಹಿಳೆ ಭಾರತದ ಪ್ರಧಾನಿಯಾಗುವ ದಿನ ಬರಲಿದೆ: ಉವೈಸಿ

ಅಸಾದುದ್ದೀನ್ ಉವೈಸಿ | Photo Credit : PTI
ಹೊಸದಿಲ್ಲಿ, ಜ.10: ಭಾರತದ ಸಂವಿಧಾನವು ಎಲ್ಲರಿಗೂ ಸಮಾನ ಸ್ಥಾನಮಾನ ನೀಡಿದ್ದು, ಭವಿಷ್ಯದಲ್ಲಿ ಹಿಜಾಬ್ ಧರಿಸುವ ಮಹಿಳೆಯೊಬ್ಬಳು ಭಾರತದ ಪ್ರಧಾನಿಯಾಗುವ ದಿನ ಬರಲಿದೆ ಎಂದು ಎಐಎಂಐಎಂ ಪಕ್ಷದ ವರಿಷ್ಠ ಅಸಾದುದ್ದೀನ್ ಉವೈಸಿ ಹೇಳಿದ್ದಾರೆ.
ಜನವರಿ 15ರಂದು ಪೌರಾಡಳಿತ ಚುನಾವಣೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನವು ಉನ್ನತ ಸಾಂವಿಧಾನಿಕ ಹುದ್ದೆಗಳನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸಿದೆ. ಆದರೆ ಭಾರತದಲ್ಲಿ ಹಾಗಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವು ಭಾರತದ ಯಾವುದೇ ಪ್ರಜೆಯು ಪ್ರಧಾನಿ, ಮುಖ್ಯಮಂತ್ರಿ ಅಥವಾ ಮೇಯರ್ ಆಗಬಹುದೆಂದು ಹೇಳುತ್ತದೆ ಎಂದು ಅವರು ಪ್ರತಿಪಾದಿಸಿದರು.
ಒಂದು ದಿನ ಹಿಜಾಬ್ ಧರಿಸಿದ ಮಗಳೊಬ್ಬಳು ಈ ದೇಶದ ಪ್ರಧಾನಿಯಾಗಬೇಕೆಂಬುದು ನನ್ನ ಕನಸಾಗಿದೆ ಎಂದು ಅವರು ಹೇಳಿದರು.
ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದ್ವೇಷ ರಾಜಕಾರಣದ ಕುರಿತು ವಾಗ್ದಾಳಿ ನಡೆಸಿದ ಅವರು, ಅದು ಹೆಚ್ಚು ಕಾಲ ಇರಲಾರದು. ದ್ವೇಷ ಹರಡುವಿಕೆಯು ಅಂತ್ಯಗೊಳ್ಳಲಿದೆ ಎಂದು ಹೇಳಿದರು.
ಉವೈಸಿ ಅವರ ಹೇಳಿಕೆಗೆ ಬಿಜೆಪಿಯು ಕಟುವಾದ ಪ್ರತಿಕ್ರಿಯೆ ನೀಡಿದ್ದು, ಹೈದರಾಬಾದ್ ನ ಈ ಸಂಸದರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಹಾಗೂ ಅರ್ಧಸತ್ಯವನ್ನಷ್ಟೇ ಮುಂದಿಡುತ್ತಿದ್ದಾರೆ ಎಂದು ಟೀಕಿಸಿದೆ. ಹಿಜಾಬ್ ಧರಿಸಿದ ಮಹಿಳೆ ಪ್ರಧಾನಿಯಾಗಬೇಕೆಂದು ಉವೈಸಿ ಹೇಳುತ್ತಾರೆ. ಸಂವಿಧಾನವು ಯಾರನ್ನೂ ತಡೆಯುವುದಿಲ್ಲ. ಆದರೆ ಮೊದಲಿಗೆ ಉವೈಸಿಯವರು ಹಿಂದುಳಿದ ಪಾಸ್ಮಾಂಡ ಮುಸ್ಲಿಂ ಸಮುದಾಯಕ್ಕೆ ಸೇರಿದ ಹಿಜಾಬ್ ಧಾರಿ ಮಹಿಳೆಯನ್ನು ಎಐಎಂಐಎಂನ ಅಧ್ಯಕ್ಷರಾಗಿ ನೇಮಿಸಲಿ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಸವಾಲು ಹಾಕಿದ್ದಾರೆ.







