NCERT ಪಠ್ಯಪುಸ್ತಕ ಪರಿಷ್ಕರಣೆ | ಇತಿಹಾಸವನ್ನು ವಿರೂಪಗೊಳಿಸಲಾಗುತ್ತಿದೆ: ಆರೆಸ್ಸೆಸ್, ಬಿಜೆಪಿ ವಿರುದ್ಧ ಉವೈಸಿ ವಾಗ್ದಾಳಿ

ಅಸದುದ್ದೀನ್ ಉವೈಸಿ | PC : PTI
ಹೊಸದಿಲ್ಲಿ: NCERT ಶಾಲಾ ಪಠ್ಯುಪುಸ್ತಕಗಳಲ್ಲಿ ಆಯ್ದ ಬದಲಾವಣೆಗಳನ್ನು ಮಾಡುವ ಮೂಲಕ, ಇತಿಹಾಸವನ್ನು ವ್ಯವಸ್ಥಿತವಾಗಿ ವಿರೂಪಗೊಳಿಸಲಾಗುತ್ತಿದೆ ಎಂದು ಆರೆಸ್ಸೆಸ್ ಹಾಗೂ ಬಿಜೆಪಿ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ದೂರದರ್ಶನದಲ್ಲಿ ನೇರವಾಗಿ ಪ್ರಸಾರವಾದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಉವೈಸಿ, “ಮುಸ್ಲಿಂ ಲೀಗ್ ನ ಲಾಹೋರ್ ಅಧಿವೇಶನದಲ್ಲಿ ಪಾಕಿಸ್ತಾನ ನಿರ್ಣಯವನ್ನು ಫಝ್ಲುಲ್ ಹಕ್ ರೊಂದಿಗೆ ಭಾರತೀಯ ಜನ ಸಂಘದ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿ ಬಂಗಾಳ ಸಚಿವ ಸಂಪುಟದಲ್ಲಿ ಬೆಂಬಲಿಸಿದ್ದ ಪ್ರಮುಖ ಐತಿಹಾಸಿಕ ವಾಸ್ತವಗಳನ್ನೇಕೆ ಶಾಲಾ ಪಠ್ಯಮಕ್ರಮಗಳಿಂದ ಹೊರಗಿಡಲಾಗಿದೆ", ಎಂದು ಪ್ರಶ್ನಿಸಿದ್ದಾರೆ.
“ಶ್ಯಾಮ್ ಪ್ರಸಾದ್ ಮುಖರ್ಜಿ ಸಚಿವರಾಗಿದ್ದರು ಎಂದು ನೀವೇಕೆ ಬೋಧಿಸುವುದಿಲ್ಲ? ಇದು ಇತಿಹಾಸ. ಇದನ್ನೇಕೆ ನೀವು ಬಚ್ಚಿಡುತ್ತಿದ್ದೀರಿ?” ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ನಾಗರಿಕ ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ ಹಾಗೂ ವಸಾಹತುಶಾಹಿ ವಿರೋಧಿ ಸತ್ಯಾಗ್ರಹದಂತಹ ಮಹತ್ವದ ಸ್ವಾತಂತ್ರ್ಯ ಹೋರಾಟಗಳಲ್ಲಿ ಆರೆಸ್ಸೆಸ್ ಪಾತ್ರವನ್ನು ಪಠ್ಯಪುಸ್ತಕಗಳಿಂದ ಕೈಬಿಡಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.
“ನೀವು ಆಯ್ದುಕೊಂಡು ವಿಷಯಗಳನ್ನು ಬೋಧಿಸುತ್ತಿದ್ದೀರಿ ಹಾಗೂ ನಿಮ್ಮ ಸೈದ್ಧಾಂತಿಕ ನಾಯಕರು ನಿಷ್ಕಳಂಕಿತರು ಎಂದು ಬಿಂಬಿಸುತ್ತಿದ್ದೀರಿ” ಎಂದು ಟೀಕಿಸಿದ ಅವರು, ಯಾವುದೇ ಸೈದ್ಧಾಂತಿಕ ಸೋಸುವಿಕೆ ಇಲ್ಲದೆ ಸತ್ಯವನ್ನು ಮಾತ್ರ ಬೋಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಶೈಕ್ಷಣಿಕ ವಿಷಯಗಳಲ್ಲಿ ಪ್ರಧಾನ ಮಂತ್ರಿಯನ್ನು ಬಿಂಬಿಸುತ್ತಿರುವ ರೀತಿಯನ್ನೂ ಪ್ರಶ್ನಿಸಿದ ಅವರು, ಆರೆಸ್ಸೆಸ್ ಪ್ರಾರ್ಥನೆ, ಪ್ರಮಾಣ ಹಾಗೂ ಸ್ಥಾಪಿತ ಸಿದ್ಧಾಂತಗಳ ಬಗ್ಗೆ ಪಾರದರ್ಶಕತೆ ಕಾಯ್ದುಕೊಳ್ಳಿ ಎಂದೂ ಒತ್ತಾಯಿಸಿದ್ದಾರೆ.







