ಬಾಬರಿ ಧ್ವಂಸದ ಕುರಿತು ಮಕ್ಕಳು ಸತ್ಯವನ್ನು ತಿಳಿದುಕೊಳ್ಳಬೇಕು : ಅಸದುದ್ದೀನ್ ಉವೈಸಿ ವಾಗ್ದಾಳಿ
ಎನ್‌ಸಿಇಆರ್‌ಟಿ ಪಠ್ಯಪುಸ್ತಕದ ವಿರುದ್ಧ ಉವೈಸಿ ಕಿಡಿ

ಹೈದರಾಬಾದ್: “ಭಾರತದ ಮಕ್ಕಳು, ಬಾಬರಿ ಮಸೀದಿ ಧ್ವಂಸವನ್ನು ಸುಪ್ರೀಂ ಕೋರ್ಟ್ ಘೋರ ಅಪರಾಧ ಕೃತ್ಯ ಎಂದು ಉಲ್ಲೇಖಿಸಿರುವ ವಿಚಾರವನ್ನು ತಿಳಿಯಬೇಕು” ಎಂದು ಬಾಬರಿ ಮಸೀದಿಗೆ ಪರ್ಯಾಯವಾಗಿ ಮೂರು ಗುಮ್ಮಟದ ರಚನೆ ಎಂಬ ಪದವನ್ನು ಪಠ್ಯದಲ್ಲಿ ನೀಡುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ನಿರ್ಧಾರಕ್ಕೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಅಸದುದ್ದೀನ್ ವಾಗ್ದಾಳಿ ನಡೆಸಿದ್ದಾರೆ.

"ಎನ್‌ಸಿಇಆರ್‌ಟಿಯು ಬಾಬರಿ ಮಸೀದಿಯನ್ನು 'ಮೂರು ಗುಮ್ಮಟಗಳ ರಚನೆ' ಎಂಬ ಪದಗಳೊಂದಿಗೆ ಬದಲಾಯಿಸಲು ನಿರ್ಧರಿಸಿದೆ. ಅಯೋಧ್ಯೆಯ ತೀರ್ಪನ್ನು 'ಒಮ್ಮತದ' ಉದಾಹರಣೆ ಎಂದು ಕರೆಯಲು ನಿರ್ಧರಿಸಿದೆ. ಇದು ಅತಿರೇಕದ ಅಪರಾಧ ಕೃತ್ಯ" ಎಂದು ಒವೈಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"1949 ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಸೀದಿಯನ್ನು ಅಪವಿತ್ರಗೊಳಿಸಿ, 1992 ರಲ್ಲಿ ಕೆಡವಲಾಯಿತು ಎಂದು ಭಾರತದ ಮಕ್ಕಳು ತಿಳಿದಿರಬೇಕು. ಅವರು ಅಪರಾಧ ಕೃತ್ಯಗಳನ್ನು ವೈಭವೀಕರಿಸುವುದನ್ನು ನೋಡುತ್ತಾ ಬೆಳೆಯಬಾರದು" ಎಂದು AIMIM ಮುಖ್ಯಸ್ಥರು ಹೇಳಿದರು.
ಈ ಹಿಂದೆ ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಅವರು ಶಾಲಾ ಪಠ್ಯಪುಸ್ತಕಗಳಲ್ಲಿನ ಬಾಬರಿ ಮಸೀದಿ ಧ್ವಂಸ ಮತ್ತು ಗುಜರಾತ್ ಗಲಭೆಯ ಉಲ್ಲೇಖಗಳಲ್ಲಿನ ಮಾರ್ಪಾಡುಗಳನ್ನು ಸಮರ್ಥಿಸಿಕೊಂಡಿದ್ದಾಗ, ಉವೈಸಿ ಕಿಡಿಕಾರಿದ್ದರು.







