ʼಪುಸ್ತಕ ಮನೆʼಯ ಅಂಕೇ ಗೌಡ, ಅರ್ಮಿಡಾ ಫೆರ್ನಾಂಡಿಸ್ ಸೇರಿದಂತೆ 45 ಮಂದಿಗೆ ʼಪದ್ಮʼ ಗೌರವ: ವರದಿ

Photo Credit : X \ Padma Awards
ಹೊಸದಿಲ್ಲಿ,ಜ.25: ವಿಶ್ವದ ಅತಿದೊಡ್ಡ ಉಚಿತ ಪ್ರವೇಶ ಗ್ರಂಥಾಲಯವನ್ನು ಸ್ಥಾಪಿಸಿದ ಮಾಜಿ ಬಸ್ ಕಂಡಕ್ಟರ್, ಏಷ್ಯಾದ ಮೊದಲ ಮಾನವ ಹಾಲಿನ ಬ್ಯಾಂಕ್ ಅನ್ನು ಆರಂಭಿಸಿದ ಮಕ್ಕಳ ತಜ್ಞೆ, 90 ವರ್ಷದ ಅಪರೂಪದ ಸಂಗೀತ ವಾದ್ಯ ವಾದಕ ಸೇರಿದಂತೆ ದೇಶದ ವಿವಿಧ ಭಾಗಗಳ 45 ಮಂದಿಯನ್ನು ಈ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಒಮ್ಮೆ ಬಸ್ ಕಂಡಕ್ಟರ್ ಆಗಿದ್ದ ಅಂಕೇ ಗೌಡ ಅವರು ವಿಶ್ವದ ಅತಿದೊಡ್ಡ ಉಚಿತ ಪ್ರವೇಶ ಗ್ರಂಥಾಲಯವೆಂದು ಗುರುತಿಸಲ್ಪಟ್ಟಿರುವ ‘ಪುಸ್ತಕ ಮನೆ’ಯನ್ನು ಸ್ಥಾಪಿಸಿದ್ದಾರೆ. ಅಪರೂಪದ ಹಸ್ತಪ್ರತಿಗಳನ್ನು ಒಳಗೊಂಡಂತೆ 20 ಭಾಷೆಗಳಲ್ಲಿ 20ಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಹೊಂದಿರುವ ಈ ಗ್ರಂಥಾಲಯವು ದೇಶದಾದ್ಯಂತ ಮುಕ್ತ ಜ್ಞಾನಕೇಂದ್ರವಾಗಿ ರೂಪುಗೊಂಡಿದೆ.
ಕರ್ನಾಟಕದ ಮಂಡ್ಯ ಸಮೀಪದ ಹರಳಹಳ್ಳಿ ಗ್ರಾಮದ 75 ವರ್ಷದ ʼಗ್ರಂಥಪಾಲಕʼ ಅಂಕೇಗೌಡರನ್ನು ಶಿಕ್ಷಣ ಕ್ಷೇತ್ರದಲ್ಲಿ ಸಮಾಜಮುಖಿ ಸೇವೆ ಹಾಗೂ ಜ್ಞಾನ ಸಬಲೀಕರಣಕ್ಕೆ ನೀಡಿದ ವಿಶಿಷ್ಟ ಕೊಡುಗೆಗಾಗಿ ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇವರೊಂದಿಗೆ ಶಿಶುಗಳ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಏಷ್ಯಾದ ಮೊದಲ ಮಾನವ ಹಾಲಿನ ಬ್ಯಾಂಕ್ ಸ್ಥಾಪಿಸಿದ ಮುಂಬೈ ಮೂಲದ ಮಕ್ಕಳ ತಜ್ಞೆ ಅರ್ಮಿಡಾ ಫೆರ್ನಾಂಡಿಸ್, ಮಧ್ಯಪ್ರದೇಶದ ಬುಂದೇಲಿ ಸಮರಕಲೆ ತರಬೇತುದಾರ ಭಗವಾನ್ದಾಸ್ ರಾಯ್ಕ್ವಾರ್, ಮಹಾರಾಷ್ಟ್ರದ 90 ವರ್ಷದ ಬುಡಕಟ್ಟು ತರ್ಪ ವಾದಕ ಭಿಕ್ಲ್ಯಾ ಲಡಕ್ಯಾ ದಿಂಡಾ (ಸೋರೆಕಾಯಿ ಮತ್ತು ಬಿದಿರಿನಿಂದ ತಯಾರಿಸಿದ ಸಂಗೀತ ವಾದ್ಯ), ಜಮ್ಮು ಮತ್ತು ಕಾಶ್ಮೀರದ ಸಮಾಜ ಸೇವಕ ಬ್ರಿಜ್ ಲಾಲ್ ಭಟ್ ಸೇರಿದಂತೆ ಹಲವು ಸಾಧಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಾಮಾನ್ಯ ಭಾರತೀಯರು ಮೌನವಾಗಿ, ಆದರೆ ನಿರಂತರವಾಗಿ ನೀಡುತ್ತಿರುವ ಅಸಾಧಾರಣ ಸೇವೆಗಳನ್ನು ಗುರುತಿಸುವ ಪರಂಪರೆಯನ್ನು ಮುಂದುವರೆಸುತ್ತಾ, ಈ ವರ್ಷದ ಪದ್ಮ ಪ್ರಶಸ್ತಿಗಳು ದೇಶದ ಉದ್ದಗಲಕ್ಕೂ ಹರಡಿರುವ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿವೆ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯ ಪರಂಪರೆಯ ಸಂರಕ್ಷಣೆ, ಗಡಿ ರಾಜ್ಯಗಳಲ್ಲಿ ರಾಷ್ಟ್ರೀಯ ಏಕೀಕರಣದ ಉತ್ತೇಜನ, ಬುಡಕಟ್ಟು ಭಾಷೆಗಳು ಮತ್ತು ಸ್ಥಳೀಯ ಸಮರಕಲೆಗಳ ಪ್ರಚಾರ, ಅಳಿಯುತ್ತಿರುವ ಕಲೆಗಳು ಹಾಗೂ ನೇಯ್ಗೆಗಳ ಪುನರುಜ್ಜೀವನ, ಪರಿಸರ ಸಂಪತ್ತಿನ ರಕ್ಷಣೆ ಮತ್ತು ಸ್ವಚ್ಛತೆಯ ಜಾಗೃತಿ—ಈ ಎಲ್ಲ ಕ್ಷೇತ್ರಗಳಲ್ಲಿ ಪ್ರಶಸ್ತಿ ಪುರಸ್ಕೃತರು ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಛತ್ತೀಸ್ಗಢದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಾಲೆಗಳನ್ನು ಸ್ಥಾಪಿಸಿದ ಬುದ್ರಿ ಥಾಟಿ, ಒಡಿಶಾದ ಸಂಥಾಲಿ ಲೇಖಕ–ಸಂಯೋಜಕ ಚರಣ್ ಹೆಂಬ್ರಾಮ್, ಮೊರಾದಾಬಾದ್ನ ಸಂಕೀರ್ಣ ಹಿತ್ತಾಳೆ ಕೆತ್ತನೆ ಕಲೆಗೈದ ಚಿರಂಜಿ ಲಾಲ್ ಯಾದವ್, ಸಾಂಪ್ರದಾಯಿಕ ಗುಜರಾತಿ ಪ್ರದರ್ಶನ ಕಲೆಯಾದ ‘ಮಾನ್ಭಟ್’ ಪರಂಪರೆಯನ್ನು ಉಳಿಸಿಕೊಂಡ ಧಾರ್ಮಿಕಲಾಲ್ ಚುನಿಲಾಲ್ ಪಾಂಡ್ಯ, ಆಫ್ರಿಕಾದಿಂದ ಭಾರತಕ್ಕೆ ಮಾನವ ವಲಸೆಯನ್ನು ಪತ್ತೆಹಚ್ಚಿದ ಹೈದರಾಬಾದ್ ಮೂಲದ ತಳಿಶಾಸ್ತ್ರಜ್ಞ ಕುಮಾರಸಾಮಿ ತಂಗರಾಜ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ.
ಪ್ರತಿಯೊಬ್ಬ ಪ್ರಶಸ್ತಿ ಪುರಸ್ಕೃತರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡಿರುವುದಷ್ಟೇ ಅಲ್ಲದೆ, ಸಮಾಜಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅನೇಕ ವೈಯಕ್ತಿಕ ಕಷ್ಟಗಳು ಹಾಗೂ ಸಂಕಷ್ಟಗಳನ್ನು ಜಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇವರಲ್ಲಿ ಅಂಚಿನಲ್ಲಿರುವ ಹಾಗೂ ದಲಿತ ಸಮುದಾಯಗಳವರು, ಪ್ರಾಚೀನ ಬುಡಕಟ್ಟು ಜನಾಂಗದವರು, ದೂರದ ಮತ್ತು ದುರ್ಗಮ ಪ್ರದೇಶಗಳಿಂದ ಬಂದವರೂ ಸೇರಿದ್ದಾರೆ.
ಆರೋಗ್ಯ, ಶಿಕ್ಷಣ, ಜೀವನೋಪಾಯ, ನೈರ್ಮಲ್ಯ ಮತ್ತು ಸುಸ್ಥಿರ ಅಭಿವೃದ್ಧಿ ಮೊದಲಾದ ಕ್ಷೇತ್ರಗಳಲ್ಲಿ ಅಂಗವಿಕಲರು, ಮಹಿಳೆಯರು, ಮಕ್ಕಳು, ದಲಿತರು ಹಾಗೂ ಬುಡಕಟ್ಟು ಸಮುದಾಯಗಳ ಹಿತಕ್ಕಾಗಿ ತಮ್ಮ ಇಡೀ ಜೀವನವನ್ನು ಸಮರ್ಪಿಸಿದವರೇ ಈ ಪ್ರಶಸ್ತಿ ಪುರಸ್ಕೃತರು ಎಂದು ಮೂಲಗಳು ತಿಳಿಸಿವೆ.
ಪ್ರಾಚೀನ ತಮಿಳು ಆಯುಧಾಧಾರಿತ ಸಮರಕಲೆಯಾದ ಸಿಲಂಬಮ್ ಅನ್ನು ಪೋಷಿಸಿ ಬೆಳೆಸಿದಕ್ಕಾಗಿ ಪುದುಚೇರಿಯ ಕೆ. ಪಜನಿವೇಲ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಭಾರತದಾದ್ಯಂತ ಹಿಂದಿ ಭಾಷೆಯ ಪ್ರಚಾರಕ್ಕಾಗಿ 60 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ ಕೈಲಾಶ್ ಚಂದ್ರ ಪಂತ್ ಅವರಿಗೆ ಸಾಹಿತ್ಯ ಮತ್ತು ಶಿಕ್ಷಣ ವಿಭಾಗದಲ್ಲಿ ಈ ಗೌರವ ಲಭಿಸಿದೆ.
ಹರಿಯಾಣ ಮತ್ತು ಹಿಮಾಚಲ ಪ್ರದೇಶಗಳ ಸಾವಿರಾರು ಕುಶಲಕರ್ಮಿಗಳಿಗೆ ವಸ್ತ್ರ ಹಾಗೂ ಜಮ್ದಾನಿ ನೇಯ್ಗೆ ತಂತ್ರವನ್ನು ಕಲಿಸಿ ಸಂರಕ್ಷಿಸಿದ ಹರಿಯಾಣದ ಖೇಮ್ ರಾಜ್ ಸುಂದ್ರಿಯಲ್ ಅವರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರು ಪಾಣಿಪತ್ ‘ಖೇಸ್’ ಅನ್ನು ಹೊಸ ವಿನ್ಯಾಸಗಳೊಂದಿಗೆ ಪುನರುಜ್ಜೀವನಗೊಳಿಸಿ, ಕೈಮಗ್ಗಗಳಲ್ಲಿ ಪಾಲಿಯೆಸ್ಟರ್ ನೂಲಿನ ಬಳಕೆಯನ್ನು ಪರಿಚಯಿಸಿದ್ದಾರೆ.
►ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ
1. ಅಂಕೇ ಗೌಡ
2. ಅರ್ಮಿಡಾ ಫೆರ್ನಾಂಡಿಸ್
3. ಭಗವಾನ್ದಾಸ್ ರಾಯ್ಕ್ವಾರ್
4. ಭಿಕ್ಲ್ಯಾ ಲಡಕ್ಯಾ ದಿಂಡಾ
5. ಬ್ರಿಜ್ ಲಾಲ್ ಭಟ್
6. ಬುದ್ರಿ ಥಾಟಿ
7. ಚರಣ್ ಹೆಂಬ್ರಾಮ್
8. ಚಿರಂಜಿ ಲಾಲ್ ಯಾದವ್
9. ಧಾರ್ಮಿಕಲಾಲ್ ಚುನಿಲಾಲ್ ಪಾಂಡ್ಯ
10. ಗಫ್ರುದ್ದೀನ್ ಮೇವಾಟಿ ಜೋಗಿ
11. ಹಾಲಿ ವಾರ್
12. ಇಂದರ್ಜಿತ್ ಸಿಂಗ್ ಸಿಧು
13. ಕೆ. ಪಜನಿವೇಲ್
14. ಕೈಲಾಶ್ ಚಂದ್ರ ಪಂತ್
15. ಖೇಮ್ ರಾಜ್ ಸುಂದ್ರಿಯಲ್
16. ಕೊಲ್ಲಕ್ಕಾಯಿಲ್ ದೇವಕಿ ಅಮ್ಮಜಿ
17. ಕುಮಾರಸಾಮಿ ತಂಗರಾಜ್
18. ಮಹೇಂದ್ರ ಕುಮಾರ್ ಮಿಶ್ರಾ
19. ಮೀರ್ ಹಾಜಿಭಾಯಿ ಕಸಂಭಾಯಿ
20. ಮೋಹನ್ ನಗರ
21. ನರೇಶ್ ಚಂದ್ರ ದೇವ್ ವರ್ಮಾ
22. ನೀಲೇಶ್ ವಿನೋದಚಂದ್ರ ಮಂಡ್ಲೇವಾಲ
23. ನೂರುದ್ದೀನ್ ಅಹಮದ್
24. ಒತ್ತುವರ್ ತಿರುಟ್ಟಣಿ ಸ್ವಾಮಿನಾಥನ್
25. ಪದ್ಮಾ ಗುರ್ಮೆಟ್
26. ಪೋಖಿಲ ಲೆಕ್ತೇಪಿ
27. ಪುನ್ನಿಮೂರ್ತಿ ನಟೇಶನ್
28. ಆರ್. ಕೃಷ್ಣನ್
29. ರಘುಪತ್ ಸಿಂಗ್
30. ರಘುವೀರ್ ತುಕಾರಾಂ ಖೇಡ್ಕರ್
31. ರಾಜಸ್ತಪತಿ ಕಾಳಿಯಪ್ಪ ಗೌಂಡರ್
32. ರಾಮ ರೆಡ್ಡಿ ಮಾಮಿಡಿ
33. ರಾಮಚಂದ್ರ ಗೋಡ್ಬೋಲೆ ಮತ್ತು ಸುನೀತಾ ಗೋಡ್ಬೋಲೆ
34. ಎಸ್. ಜಿ. ಸುಶೀಲಮ್ಮ
35. ಸಂಗ್ಯುಸಾಂಗ್ ಎಸ್. ಪೊಂಗೆನರ್
36. ಶಾಫಿ ಶೌಕ್
37. ಶ್ರೀರಂಗ್ ದೇವಬ ಲಾಡ್
38. ಶ್ಯಾಮ್ ಸುಂದರ್
39. ಸಿಮಾಂಚಲ್ ಪತ್ರೋ
40. ಸುರೇಶ್ ಹನಗವಾಡಿ
41. ತಗಾ ರಾಮ್ ಭಿಲ್
42. ಟೆಕಿ ಗುಬಿನ್
43. ತಿರುವಾರೂರ್ ಭಕ್ತವತ್ಸಲಂ
44. ವಿಶ್ವ ಬಂಧು
45. ಯುಮ್ನಮ್ ಜತ್ರಾ ಸಿಂಗ್







