30 ಮಂದಿ ಅಪ್ರತಿಮ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟ

ಪದ್ಮಶ್ರೀ ಪ್ರಶಸ್ತಿ | PTI
ಹೊಸದಿಲ್ಲಿ: ಗೋವಾದ 100 ವರ್ಷದ ಸ್ವಾತಂತ್ರ್ಯ ಹೋರಾಟಗಾರ, ಪುರುಷ ಪ್ರಾಬಲ್ಯದ ಧಕ್ ಕ್ರೀಡೆಯಲ್ಲಿ 150 ಮಹಿಳೆಯರಿಗೆ ತರಬೇತಿ ನೀಡಿದ ಪಶ್ಚಿಮ ಬಂಗಾಳದ ಧಕ್ ವಾದ್ಯಗಾರ ಹಾಗೂ ಭಾರತದ ಪ್ರಪ್ರಥಮ ಮಹಿಳಾ ಬೊಂಬೆಯಾಟಗಾರರು ಸೇರಿದಂತೆ 30 ಮಂದಿ ಅಪ್ರತಿಮ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ಶನಿವಾರ ಸರಕಾರ ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.
ಗೋವಾ ವಿಮೋಚನಾ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಿಬಿಯ ಲೋಬೊ ಸರ್ದೇಸಾಯಿ, ಪೋರ್ಚುಗೀಸರ ಆಡಳಿತದ ವಿರುದ್ಧ ಜನ ಹೋರಾಟ ನಡೆಸಲು ‘ವೊಝ್ ಡ ಲಿಬರ್ಡಾಬೆ’ ಎಂಬ ಭೂಗತ ರೇಡಿಯೊ ವಾಹಿನಿಯನ್ನು ಸ್ಥಾಪಿಸಿದ್ದರು. ಅವರಿಗೆ 76ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿ ಪ್ರದಾನವಾಗಲಿದೆ.
150 ಮಹಿಳೆಯರನ್ನು ಪುರುಷ ಪ್ರಾಬಲ್ಯದ ಧಕ್ ಸಾಧನದಲ್ಲಿ ತರಬೇತಿ ನೀಡುವ ಮೂಲಕ ಲಿಂಗ ತಾರತಮ್ಯವನ್ನು ಮುರಿದಿದ್ದ ಪಶ್ಚಿಮ ಬಂಗಾಳದ ಗೋಕುಲ್ ಚಂದ್ರ ಡೇ ಅವರಿಗೂ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇವರೊಂದಿಗೆ ಅಮೆರಿಕದಲ್ಲಿ ಜನಿಸಿ, ರಾಣಿ ಅಹಲ್ಯಾಬಾಯಿ ಪರಂಪರೆಯಿಂದ ಪ್ರೇರಣೆಗೊಂಡು, 300 ವರ್ಷದಷ್ಟು ಹಳೆಯದಾದ ನೇಕಾರಿಕೆಯನ್ನು ಪುನರುಜ್ಜೀವನಗೊಳಿಸಿದ್ದ ಮಹಿಳಾ ಸಬಲೀಕರಣದ ವಕ್ತಾರೆ, 82 ವರ್ಷದ ಸ್ಯಾಲಿ ಹೋಳ್ಕರ್ ಅವರಿಗೂ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ.





