2023ರ ಪದ್ಮಶ್ರೀ ಪ್ರಶಸ್ತಿ ವಿವಾದ : ಸ್ಪಷ್ಟನೆ ನೀಡುವಂತೆ ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಿದ ಒಡಿಶಾ ಹೈಕೋರ್ಟ್

ಒಡಿಶಾ ಹೈಕೋರ್ಟ್ (Photo credit: newindianexpress.com)
ಕಟಕ್: 2023ರಲ್ಲಿ ʼಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರʼದಲ್ಲಿ ಅಂತರ್ಯಾಮಿ ಮಿಶ್ರಾ ಅವರಿಗೆ ನೀಡಲಾದ ಪದ್ಮ ಪ್ರಶಸ್ತಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಒಡಿಶಾ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಿದೆ.
2023ರ ಜನವರಿ 25ರಂದು ಘೋಷಿಸಲಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆದರೆ, ಅದೇ ಹೆಸರಿನ ಇನ್ನೋರ್ವ ವ್ಯಕ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ ಎಂದು ಆರೋಪಿಸಿ ಅಂತರ್ಯಾಮಿ ಮಿಶ್ರಾ ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯ ಹಿನ್ನೆಲೆ ನ್ಯಾಯಮೂರ್ತಿ ಎಸ್ ಕೆ ಪಾಣಿಗ್ರಾಹಿ ಅವರ ಪೀಠ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ʼರಾಜ್ಯ ಸರ್ಕಾರವು ಪರಿಶೀಲನೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ, ಪದ್ಮಶ್ರೀ ಪ್ರಶಸ್ತಿ ಘೋಷಣೆಗೂ ಮುನ್ನ ವಿವಿಧ ನಿಯಮಾವಳಿಗಳನ್ನು ಪಾಲಿಸಬೇಕಿದ್ದರೂ, ಇಂತಹ ಪ್ರತಿವಾದದ ಪರಿಸ್ಥಿತಿ ಉದ್ಭವಿಸಿರುವುದು ಆಶ್ಚರ್ಯಕರವಾಗಿದೆʼ ಎಂದು ಅರ್ಜಿ ವಿಚಾರಣೆಯ ವೇಳೆ ನ್ಯಾಯಮೂರ್ತಿ ಎಸ್ ಕೆ ಪಾಣಿಗ್ರಾಹಿ ಅವರು ಹೇಳಿದ್ದಾರೆ.
ವಿವಾದದ ಗಂಭೀರತೆಯನ್ನು ಪರಿಗಣಿಸಿ, ಫೆಬ್ರವರಿ 24ರಂದು ಮಧ್ಯಾಹ್ನ 2 ಗಂಟೆಗೆ ಮೊದಲು 2023ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದವರು(ಅಂತರ್ಯಾಮಿ ಮಿಶ್ರಾ) ಮತ್ತು ದೂರುದಾರರು(ಅಂತರ್ಯಾಮಿ ಮಿಶ್ರಾ) ಇಬ್ಬರೂ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.
ಅರ್ಜಿದಾರರ ಪ್ರಕಾರ, ಅವರು ವೃತ್ತಿಯಲ್ಲಿ ವೈದ್ಯ ಮತ್ತು ಸಾಹಿತಿಯಾಗಿದ್ದಾರೆ. ಅವರು ಒಡಿಶಾ ಮತ್ತು ಇತರ ಭಾರತೀಯ ಭಾಷೆಗಳಲ್ಲಿ 29 ಪುಸ್ತಕಗಳನ್ನು ಬರೆದಿದ್ದಾರೆ. ಸಾಹಿತ್ಯಕ್ಕೆ ಅವರ ಕೊಡುಗೆಗಳನ್ನು ಗುರುತಿಸಿ 2023ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಆದರೆ ಪ್ರಶಸ್ತಿ ಸ್ವೀಕರಿಸಿದ ವ್ಯಕ್ತಿಯು ವೃತ್ತಿಯಲ್ಲಿ ಪತ್ರಕರ್ತನಾಗಿದ್ದಾನೆ. ಯಾವುದೇ ಪುಸ್ತಕವನ್ನು ಬರೆದಿಲ್ಲ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.







