ಪಹಲ್ಗಾಮ್ ದಾಳಿಯ ಬಳಿಕ ಅಸ್ಸಾಮಿನಲ್ಲಿ 71 ‘ದೇಶವಿರೋಧಿ’ಗಳ ಬಂಧನ

ಸಾಂದರ್ಭಿಕ ಚಿತ್ರ
ಗುವಾಹಟಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ‘ದೇಶವಿರೋಧಿ’ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಅಸ್ಸಾಮಿನಲ್ಲಿ ಇನ್ನೂ ಮೂವರನ್ನು ಬಂಧಿಸಲಾಗಿದ್ದು,ಇದರೊಂದಿಗೆ ಈವರೆಗೆ ಬಂಧಿತರ ಸಂಖ್ಯೆ 71ಕ್ಕೇರಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಸೋಮವಾರ ತಿಳಿಸಿದ್ದಾರೆ.
ಕೊಕ್ರಝಾರ್, ಗೋಲ್ಪಾರಾ ಮತ್ತು ದಕ್ಷಿಣ ಸಲ್ಮಾರ-ಮಂಕಚಾರ್ ಜಿಲ್ಲೆಗಳಲ್ಲಿ ತಲಾ ಓರ್ವರನ್ನು ಬಂಧಿಸಲಾಗಿದೆ ಎಂದು ಅವರು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಈ ಹಿಂದೆ ಪಾಕಿಸ್ತಾನವನ್ನು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಅದರ ಶಾಮೀಲಾತಿಯನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ದೇಶದ್ರೋಹ ಆರೋಪದಲ್ಲಿ ಪ್ರತಿಪಕ್ಷ ಎಐಯುಡಿಎಫ್ ಶಾಸಕ ಅಮಿನುಲ್ ಇಸ್ಲಾಮ್ ಅವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಜಾಮೀನು ಪಡೆದುಕೊಂಡ ಬಳಿಕ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮತ್ತೆ ಬಂಧಿಸಲಾಗಿದೆ.
ಪಹಲ್ಗಾಮ್ ದಾಳಿಯ ಬಳಿಕ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಶರ್ಮಾ ಮೇ 2ರಂದು ಎಚ್ಚರಿಕೆ ನೀಡಿದ್ದರು.





