ಪಹಲ್ಗಾಮ್ ಭಯೋತ್ಪಾದಕ ದಾಳಿ | ಟಿಆರ್ಎಫ್ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಅಮೆರಿಕ; ಭಾರತದಿಂದ ಸ್ವಾಗತ

PC : PTI
ಹೊಸದಿಲ್ಲಿ,ಜು.18: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರೆ ತೈಬಾ(ಎಲ್ಇಟಿ)ದ ಸಂಯೋಜಿತ ಗುಂಪು ದಿ ರೆಸಿಸ್ಟನ್ಸ್ ಫ್ರಂಟ್(ಟಿಆರ್ಎಫ್)ನ್ನು ವಿದೇಶಿ ಭಯೋತ್ಪಾದಕ ಸಂಘಟನೆ(ಎಫ್ಟಿಓ) ಮತ್ತು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ(ಎಸ್ಡಿಜಿಟಿ) ಎಂದು ಅಮೆರಿಕವು ಔಪಚಾರಿಕವಾಗಿ ಘೋಷಿಸಿದೆ. ಅಮೆರಿಕದ ನಿರ್ಧಾರವನ್ನು ಭಾರತವು ಸ್ವಾಗತಿಸಿದೆ.
26 ಜನರನ್ನು ಬಲಿ ತೆಗೆದುಕೊಂಡಿದ್ದ ಎ.22ರ ಭಯೋತ್ಪಾದಕ ದಾಳಿಯ ಹೊಣೆಯನ್ನು ಟಿಆರ್ಎಫ್ ವಹಿಸಿಕೊಂಡ ಬಳಿಕ ಈ ಬೆಳವಣಿಗೆ ನಡೆದಿದೆ.
‘ಟಿಆರ್ಎಫ್ನ್ನು ಎಫ್ಟಿಒ ಮತ್ತು ಎಸ್ಡಿಜಿಟಿ ಎಂದು ಘೋಷಿಸಿರುವ ಅಮೆರಿಕದ ವಿದೇಶಾಂಗ ಇಲಾಖೆಯ ನಿರ್ಧಾರವನ್ನು ಭಾರತ ಸರಕಾರವು ಸ್ವಾಗತಿಸುತ್ತದೆ. ಈ ವಿಷಯದಲ್ಲಿ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಅವರ ನಾಯಕತ್ವವನ್ನು ನಾವು ಅಂಗೀಕರಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ)ವು ಶುಕ್ರವಾರ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
ಟಿಆರ್ಎಫ್ ತಾನು ಎರಡು ಸಲ ಹೊಣೆಗಾರಿಕೆಯನ್ನು ಒಪ್ಪಿಕೊಂಡಿದ್ದ ಪಹಲ್ಗಾಮ್ ದಾಳಿ ಸೇರಿದಂತೆ ಹಲವಾರು ಭಯೋತ್ಪಾದನೆ ಚಟುವಟಿಕೆಗಳಿಗೆ ಕಾರಣವಾಗಿದೆ ಎಂದೂ ಎಂಇಎ ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೂ ಅಮೆರಿಕದ ನಿರ್ಧಾರವನ್ನು ಎಕ್ಸ್ ಪೋಸ್ಟ್ನಲ್ಲಿ ಪ್ರಶಂಸಿಸಿದ್ದಾರೆ.
ಅಮೆರಿಕದ ವಿದೇಶಾಂಗ ಇಲಾಖೆಯ ಪ್ರಕಾರ ಪಹಲ್ಗಾಮ್ ದಾಳಿಯು ಎಲ್ಇಟಿ ನಡೆಸಿದ್ದ 2008ರ ಮುಂಬೈ ದಾಳಿಗಳ ಬಳಿಕ ಭಾರತೀಯ ಪ್ರಜೆಗಳ ಮೇಲಿನ ಅತ್ಯಂತ ಮಾರಣಾಂತಿಕ ದಾಳಿಯಾಗಿತ್ತು.
ತೀರ ಇತ್ತೀಚಿಗೆ 2024ರಲ್ಲಿ ಸೇರಿದಂತೆ ಭಾರತೀಯ ರಕ್ಷಣಾ ಪಡೆಗಳ ವಿರುದ್ಧ ಹಲವಾರು ದಾಳಿಗಳ ಹೊಣೆಯನ್ನೂ ಟಿಆರ್ಎಫ್ ವಹಿಸಿಕೊಂಡಿದೆ ಎಂದೂ ಅಮೆರಿಕದ ವಿದೇಶಾಂಗ ಇಲಾಖೆಯು ತಿಳಿಸಿದೆ.
►ಭಯೋತ್ಪಾದನೆಯನ್ನು ಎದುರಿಸಲು ಅಮೆರಿಕ ಬದ್ಧ:ರೂಬಿಯೊ
‘ವಿದೇಶಾಂಗ ಇಲಾಖೆಯು ತೆಗೆದುಕೊಂಡಿರುವ ಈ ಕ್ರಮಗಳು ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು,ಭಯೋತ್ಪಾದನೆಯನ್ನು ಎದುರಿಸಲು ಮತ್ತು ಪಹಲ್ಗಾಮ್ ದಾಳಿಗೆ ನ್ಯಾಯಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕರೆಯನ್ನು ಜಾರಿಗೊಳಿಸಲು ಟ್ರಂಪ್ ಆಡಳಿತದ ಬದ್ಧತೆಯನ್ನು ಪ್ರದರ್ಶಿಸುತ್ತದೆ’ ಎಂದು ಮಾರ್ಕೊ ರೂಬಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ಕಲಂ 219 ಮತ್ತು ಕಾರ್ಯ ನಿರ್ವಾಹಕ ಆದೇಶ 13224ರ ಅನುಗುಣವಾಗಿ ಎಫ್ಟಿಒ ಮತ್ತು ಎಸ್ಡಿಜಿಟಿ ಎಂದು ಎಲ್ಇಟಿಯ ನಿಯೋಜನೆಗೆ ಟಿಆರ್ಎಫ್ ಮತ್ತು ಇತರ ಸಹವರ್ತಿ ಅಲಿಯಾಸ್ಗಳನ್ನು ಸೇರಿಸಲಾಗಿದೆ. ವಿದೇಶಾಂಗ ಇಲಾಖೆಯು ಎಲ್ಇಟಿಯ ಎಫ್ಟಿಒ ನಿಯೋಜನೆಯನ್ನು ಪುನರ್ ಪರಿಶೀಲಿಸಿದೆ ಮತ್ತು ಅದನ್ನು ಮುಂದುವರಿಸಿದೆ. ಫೆಡರಲ್ ರಿಜಿಸ್ಟರ್ ನಲ್ಲಿ ಪ್ರಕಟಗೊಂಡ ಬಳಿಕ ಎಫ್ಟಿಒ ಘೋಷಣೆಗೆ ತಿದ್ದುಪಡಿಗಳು ಜಾರಿಗೆ ಬರಲಿವೆ ಎಂದೂ ಅವರು ತಿಳಿಸಿದ್ದಾರೆ.
ಅಮೆರಿಕದಲ್ಲಿಯ ಭಾರತೀಯ ರಾಯಭಾರ ಕಚೇರಿಯೂ ಹೇಳಿಕೆಯೊಂದನ್ನು ಹೊರಡಿಸಿ ಈ ಕ್ರಮವನ್ನು ಭಾರತ-ಅಮೆರಿಕ ನಡುವಿನ ಬಲವಾದ ಭಯೋತ್ಪಾದನೆ ನಿಗ್ರಹ ಸಹಕಾರದ ಇನ್ನೊಂದು ನಿದರ್ಶನವಾಗಿದೆ. ಭಯೋತ್ಪಾದನೆಗೆ ಯಾವುದೇ ಸಹಿಷ್ಣುತೆ ಇಲ್ಲ ಎಂದು ತಿಳಿಸಿದೆ.







