ಪಹಲ್ಗಾಮ್ ಭಯೋತ್ಪಾದಕ ದಾಳಿ : ತನಿಖಾವಧಿ , ಆರೋಪಿಗಳ ಕಸ್ಟಡಿ ವಿಸ್ತರಣೆ

PC : PTI
ಜಮ್ಮು,ಸೆ.19: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಇಬ್ಬರು ಆರೋಪಿಗಳ ಕಸ್ಟಡಿಯನ್ನು ಜಮ್ಮುವಿನ ವಿಶೇಷ ನ್ಯಾಯಾಲಯವು ವಿಸ್ತರಿಸಿದೆ. ವಾಡಿಕೆಯ 90 ದಿನಗಳನ್ನು ಮೀರಿ ಅವರನ್ನು 45 ಹೆಚ್ಚುವರಿ ದಿನಗಳ ಕಾಲ ಕಸ್ಟಡಿಯಲ್ಲಿ ಇರಿಸಿಕೊಳ್ಳಲು ತನಿಖಾಧಿಕಾರಿಗಳಿಗೆ ಅನುಮತಿ ನೀಡಿದೆ.
ಸೆ.18ರಂದು ವಿಶೇಷ ನ್ಯಾಯಾಧೀಶ ಸಂದೀಪ ಗಂಡೋತ್ರಾ ಅವರು ಪಹಲ್ಗಾಮ್ನ ಬೈಸರನ್ ನಿವಾಸಿ ಬಶೀರ್ ಅಹ್ಮದ್ ಜೋಥಾಟ್ ಮತ್ತು ಬಟ್ಕೋಟ್ ನಿವಾಸಿ ಪರ್ವೈಝ್ ಅಹ್ಮದ್ ವಿರುದ್ಧ ತನಿಖೆಯನ್ನು ಮುಂದುವರಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್ಐಎ) ಅನುಮತಿ ನೀಡಿದರು.
ಎ.22ರ ಪಹಲ್ಗಾಮ್ ದಾಳಿಯನ್ನು ನಡೆಸಿದ್ದ ಪಾಕಿಸ್ತಾನಿ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಬಶೀರ್ ಮತ್ತು ಪರ್ವೈಝ್ರನ್ನು ಜೂನ್ 22ರಂದು ಬಂಧಿಸಲಾಗಿದ್ದು, ಜಮ್ಮುವಿನ ಅಂಫಲ್ಲಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರು ದಾಳಿಗೆ ಮುನ್ನ ಪಹಲ್ಗಾಮ್ನ ಹಿಲ್ ಪಾರ್ಕ್ನಲ್ಲಿಯ ಗುಡಿಸಲೊಂದರಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದರು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ವಿಧಿವಿಜ್ಞಾನ ಪರೀಕ್ಷೆಗಳು ಮತ್ತು ಡಿಎನ್ಎ ಪ್ರೊಫೈಲಿಂಗ್ ಬಾಕಿಯಿರುವುದನ್ನು ಉಲ್ಲೇಖಿಸಿದ ನ್ಯಾಯಾಧೀಶರು, ಹೆಚ್ಚಿನ ಸಮಯಾವಕಾಶವನ್ನು ಸಮರ್ಥಿಸಲು ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದರು. ತನಿಖೆಯನ್ನು ಸಾಧ್ಯವಾದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಅವರು ಎನ್ಐಎಗೆ ನಿರ್ದೇಶನ ನೀಡಿದರು.
ಮೂಲ 90 ದಿನಗಳ ಮತ್ತು ಹೆಚ್ಚುವರಿ 10 ದಿನಗಳ ನ್ಯಾಯಾಂಗ ಬಂಧನ ಅವಧಿ ಶುಕ್ರವಾರ ಅಂತ್ಯಗೊಳ್ಳಲಿದ್ದರಿಂದ ಇಬ್ಬರೂ ಆರೋಪಿಗಳನ್ನು ವರ್ಚುವಲ್ ಆಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಪ್ರಕರಣವು ನಿರ್ಣಾಯಕ ಹಂತದಲ್ಲಿರುವುದರಿಂದ ಹೆಚ್ಚಿನ ಸಮಯಾವಕಾಶಕ್ಕಾಗಿ ಎನ್ಐಎ ಮನವಿಯನ್ನು ಆಧಾರ ಸಹಿತವಾಗಿದೆ ಮತ್ತು ಸ್ವೀಕಾರಕ್ಕೆ ಅರ್ಹವಾಗಿದೆ ಎಂದು ನ್ಯಾಯಾಧೀಶರು ಬಣ್ಣಿಸಿದರು. ಸಾಕ್ಷಿಗಳ ಹೇಳಿಕೆಗಳು, ಡಿಎನ್ಎ ವಿಶ್ಲೇಷಣೆ ಮತ್ತು ವಿಧಿವಿಜ್ಞಾನ ವರದಿಗಳು ಇನ್ನೂ ಬಾಕಿಯಿವೆ ಎನ್ನುವುದನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತ್ತು.
ಹೋಲಿಕೆಗಾಗಿ ಆರೋಪಿಗಳ ಡಿಎನ್ಎ ಪ್ರೊಫೈಲಿಂಗ್ ವರದಿಗಾಗಿಯೂ ಕಾಯಲಾಗುತ್ತಿದೆ. ಆರೋಪಿಗಳ ರಿಮಾಂಡ್ ಮತ್ತು ಬಂಧನವನ್ನು ನಿಗದಿತ 90 ದಿನಗಳನ್ನು ಮೀರಿ ವಿಸ್ತರಿಸಲು ಬಲವಾದ ಕಾರಣಗಳಿವೆ ಎಂದು ಹೇಳಿದ ಎನ್ಐಎ ಪರ ವಕೀಲ ಚಂದನಕುಮಾರ ಸಿಂಗ್ ಅವರು , ಕಾನೂನುಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆ(ಯುಎಪಿಎ) ಅಡಿ ಕಸ್ಟಡಿ ಅವಧಿಯನ್ನು 90 ದಿನಗಳಿಂದ 180 ದಿನಗಳಿಗೆ ವಿಸ್ತರಿಸುವಂತೆ ಕೋರಿಕೊಂಡರು.
ಪಾಕಿಸ್ತಾನಿ ಸಂಖ್ಯೆಗಳಿಗೆ ಸಂಬಂಧಿಸಿದ ಮೊಬೈಲ್ ಫೋನ್ ಡೇಟಾ ಹಾಗೂ ಉಗ್ರರು ಬಳಸಿದ್ದ ಹೊದಿಕೆಗಳು ಮತ್ತು ಶಾಲುಗಳ ವಿಧಿವಿಜ್ಞಾನ ಪರೀಕ್ಷೆ ಸೇರಿದಂತೆ ನಿರ್ಣಾಯಕ ಪುರಾವೆಗಳು ಅಪೂರ್ಣವಾಗಿ ಉಳಿದಿವೆ ಎಂದು ಅವರು ವಾದಿಸಿದರು.
ಆರೋಪಿಗಳ ಮೊಬೈಲ್ ಫೋನ್ಗಳಲ್ಲಿ ಕೆಲವು ಪಾಕಿಸ್ತಾನಿ ನಂಬರ್ಗಳು ಪತ್ತೆಯಾಗಿದ್ದು, ಅವರ ವಿವರಗಳನ್ನು ಖಚಿತಪಡಿಸಿಕೊಳ್ಳಬೇಕಿದೆ. ಜುಲೈ 28ರಂದು ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟ ಮೂವರು ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾದ ಕೆಲವು ಸೊತ್ತುಗಳನ್ನು ಎನ್ಎಫ್ಎಸ್ಯು ಗಾಂಧಿನಗರಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಹತ್ಯೆಯಾದ ಭಯೋತ್ಪಾದಕರಿಂದ ಕೆಲವು ಶಸ್ತ್ರಾಸ್ತ್ರಗಳು ಮತ್ತು ಗುಂಡುಗಳನ್ನೂ ವಶಪಡಿಸಿಕೊಳ್ಳಲಾಗಿದ್ದು, ಎಫ್ಎಸ್ಎಲ್ ವರದಿಯ ವಿವರಗಳಿಗಾಗಿ ಈಗಲೂ ಕಾಯಲಾಗುತ್ತಿದೆ ಎಂದು ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು.
ಆರೋಪಿಗಳ ನೆರವಿನಿಂದ ವಶಪಡಿಸಿಕೊಳ್ಳಲಾಗಿರುವ ಹೊದಿಕೆಗಳು, ಬೆಡ್ಶೀಟ್ಗಳು ಮತ್ತು ಶಾಲುಗಳನ್ನು ಡಿಎನ್ಎ ಪರೀಕ್ಷೆಗಾಗಿ ಸಿಎಫ್ಎಸ್ಎಲ್ ಚಂಡಿಗಢಕ್ಕೆ ಕಳುಹಿಸಲಾಗಿದ್ದು, ಅದರ ವರದಿಯಿನ್ನೂ ಕೈಸೇರಬೇಕಿದೆ ಎಂದರು.
ಎನ್ಐಎ ಪ್ರಕಾರ ದಾಳಿಕೋರರು ಲಷ್ಕರೆ ತೈಬಾಕ್ಕೆ ಸೇರಿದ ಪಾಕಿಸ್ತಾನಿ ಪ್ರಜೆಗಳಾಗಿದ್ದರು ಎನ್ನುವುದನ್ನು ಆರೋಪಿಗಳು ಬಹಿರಂಗಗೊಳಿಸಿದ್ದಾರೆ.
ಎ.22ರಂದು ಪಹಲ್ಗಾಮ್ನಲ್ಲಿ ಪ್ರವಾಸಿಗಳ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದು,ಇತರ 16 ಜನರು ಗಾಯಗೊಂಡಿದ್ದರು.







