ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣ | ಮೂವರು ಶಂಕಿತ ಭಯೋತ್ಪಾದಕರ ಮನೆಗಳು ನೆಲಸಮ

PC :thehindu.com \ IMRAN NISSAR
ಶ್ರೀನಗರ: ಮೂವರು ಶಂಕಿತ ಭಯೋತ್ಪಾದಕರಿಗೆ ಸೇರಿದ ಮನೆಗಳನ್ನು ಕಾಶ್ಮೀರ ಕಣಿವೆಯಲ್ಲಿ ಆಡಳಿತ ನೆಲಸಮಗೊಳಿಸಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮ, ಶೋಪಿಯಾನ ಹಾಗೂ ಕುಲ್ಗಾಂವ್ ಜಿಲ್ಲೆಗಳಲ್ಲಿ ಶಂಕಿತ ಭಯೋತ್ಪಾದಕರಿಗೆ ಸೇರಿದ್ದೆಂದು ಹೇಳಲಾದ ಮನೆಗಳನ್ನು ಶುಕ್ರವಾರ ರಾತ್ರಿ ನೆಲಸಮಗೊಳಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಈ ಹಿಂದೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರಧಾನ ಶಂಕಿತ ಸೇರಿದಂತೆ ಲಷ್ಕರೆ ತಯ್ಯಿಬದ ಇಬ್ಬರು ಭಯೋತ್ಪಾದಕರ ಮನೆಗಳು ಅಲ್ಲಿ ದಾಸ್ತಾನು ಇರಿಸಲಾಗಿದ್ದ ಸ್ಫೋಟಕ ಸಿಡಿದು ಗುರುವಾರ ತಡ ರಾತ್ರಿ ನಾಶಗೊಂಡಿತ್ತು.
ಪುಲ್ವಾಮಾ ಜಿಲ್ಲೆಯ ಮುರಾನ್ ಪ್ರದೇಶದಲ್ಲಿರುವ ಅಹ್ಸನ್ ಅಲ್ ಹಕ್ ಶೇಖ್ನ ಮನೆಯನ್ನು ಶುಕ್ರವಾರ ರಾತ್ರಿ ನೆಲಸಮಗೊಳಿಸಲಾಗಿದೆ. ಈತ ಪಾಕಿಸ್ತಾನದಲ್ಲಿ 2018ರಲ್ಲಿ ತರಬೇತಿ ಪಡೆದಿದ್ದ ಹಾಗೂ ಇತ್ತೀಚೆಗೆ ಕಣಿವೆಯ ಒಳ ನುಸುಳಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೋಪಿಯಾನ ಜಿಲ್ಲೆಯ ಚೋಟಿಪೋರಾ ಜಿಲ್ಲೆಯಲ್ಲಿ ನಡೆಸಿದ ಇದೇ ರೀತಿಯ ಕಾರ್ಯಾಚರಣೆಯಲ್ಲಿ ಲಷ್ಕರೆ ತಯ್ಯಿಬ (ಎಸ್ಇಟಿ)ದ ಸಕ್ರಿಯ ಉನ್ನತ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟೆಯ ಮನೆಯನ್ನು ನೆಲಸಮಗೊಳಿಸಲಾಗಿದೆ. ಕುಟ್ಟೆ ಕಳೆದ ನಾಲ್ಕೈದು ವರ್ಷಗಳಿಂದ ಸಕ್ರಿಯನಾಗಿದ್ದ. ಆತ ಹಲವು ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.
ಕುಲ್ಗಾಮ್ ಜಿಲ್ಲೆಯ ಮತಲ್ ಹಾಮಾ ಪ್ರದೇಶದಲ್ಲಿರುವ ಝಾಕಿರ್ ಅಹ್ಮದ್ ಗನಿಯ ಮನೆಯನ್ನು ಶುಕ್ರವಾರ ರಾತ್ರಿ ನೆಲಸಮಗೊಳಿಸಲಾಗಿದೆ. ಈತ 2023ರಿಂದ ಸಕ್ರಿಯನಾಗಿದ್ದ ಹಾಗೂ ಭಯೋತ್ಪಾದನೆಗೆ ಸಂಬಂಧಿಸಿದ ಹಲವು ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ ಕಣ್ಗಾವಲಿಗೆ ಒಳಗಾಗಿದ್ದ.
ಇದರೊಂದಿಗೆ ಶಂಕಿತ ಭಯೋತ್ಪಾದಕರ ಐದು ಮನೆಗಳನ್ನು ನೆಲಸಮಗೊಳಿಸಿದಂತಾಗಿದೆ.







