ಜಮ್ಮು ಕಾಶ್ಮೀರ | ಬಾರಾಮುಲ್ಲಾದಲ್ಲಿ ಸೇನಾ ಠಾಣೆಯ ಮೇಲೆ ದಾಳಿಗೆ ಉಗ್ರರಿಂದ ವಿಫಲ ಯತ್ನ; ಓರ್ವ ಯೋಧ ಹುತಾತ್ಮ

ಸಾಂದರ್ಭಿಕ ಚಿತ್ರ (File Photo: PTI)
ಬಾರಾಮುಲ್ಲಾ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನ ಟಿಕ್ಕಾ ಪೋಸ್ಟ್ ಸಮೀಪದ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಪಾಕಿಸ್ತಾನ ಮೂಲದ ಉಗ್ರರು ನಡೆಸಿದ ಒಳನುಸುಳುವಿಕೆ ಮತ್ತು ಗಡಿ ಕ್ರಿಯಾ ತಂಡ (ಬಿಎಟಿ) ದಾಳಿಯ ಪ್ರಯತ್ನವನ್ನು ಭಾರತೀಯ ಸೇನೆಯು ಯಶಸ್ವಿಯಾಗಿ ವಿಫಲಗೊಳಿಸಿದೆ. ಈ ಸಂದರ್ಭದ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ.
ಆಗಸ್ಟ್ 12 ಮತ್ತು 13ರ ಮಧ್ಯರಾತ್ರಿಯಲ್ಲಿ 16 ಸಿಖ್ ಎಲ್ಐ (09 ಬಿಹಾರ ಅಡ್ವಾನ್ಸ್ ಪಾರ್ಟಿ) ಘಟಕದ ವ್ಯಾಪ್ತಿಯ ಪ್ರದೇಶದಲ್ಲಿ ಭಯೋತ್ಪಾದಕರು ಮುಂಚೂಣಿ ಠಾಣೆಯ ಮೇಲೆ ದಾಳಿ ನಡೆಸಲು ಯತ್ನಿಸಿದರು. ಭಾರತೀಯ ಸೇನೆ ತಕ್ಷಣ ಪ್ರತಿದಾಳಿ ನಡೆಸಿ, ಒಳನುಸುಳುವಿಕೆಯನ್ನು ಸಂಪೂರ್ಣವಾಗಿ ವಿಫಲಗೊಳಿಸಿದವು. ನಂತರ, ಕತ್ತಲಿನ ಪ್ರದೇಶದಲ್ಲಿ ಅಡಗಿಕೊಂಡಿದ್ದ ಉಗ್ರರನ್ನು ಪತ್ತೆಹಚ್ಚಲು ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಯಿತು.
ಗುಂಡಿನ ಚಕಮಕಿಯಲ್ಲಿ ಸಿಪಾಯಿ ಬನೋತ್ ಅನಿಲ್ ಕುಮಾರ್ ಗಂಭೀರವಾಗಿ ಗಾಯಗೊಂಡು ಹುತಾತ್ಮರಾದರು.
ಈ ಘಟನೆ, ದಕ್ಷಿಣ ಕಾಶ್ಮೀರದ ಕುಲಗಾಂ ಜಿಲ್ಲೆಯ ಅಖಾಲ್ ಪ್ರದೇಶದಲ್ಲಿ ಆಗಸ್ಟ್ 1ರಿಂದ ನಡೆಯುತ್ತಿರುವ ‘ಆಪರೇಷನ್ ಅಖಾಲ್’ ನಡುವೆಯೇ ನಡೆದಿದೆ. ‘ಆಪರೇಷನ್ ಅಖಾಲ್’ ಕಾರ್ಯಾಚರಣೆಯಲ್ಲಿ ಇದುವರೆಗೆ ಐದಕ್ಕೂ ಹೆಚ್ಚು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದೆ.





