ರಕ್ಷಣಾ ಇಲಾಖೆಯ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಲು ಯತ್ನಿಸಿದ ಪಾಕ್ ಸೈಬರ್ ದಾಳಿಕೋರರು; ವರದಿ

Photo credit: indiatoday.in
ಹೊಸದಿಲ್ಲಿ : ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತ –ಪಾಕ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಪಾಕಿಸ್ತಾನದ ಹ್ಯಾಕರ್ಗಳು ಭಾರತೀಯ ರಕ್ಷಣಾ ಇಲಾಖೆಯ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ ಮತ್ತು ರಕ್ಷಣಾ ಸಿಬ್ಬಂದಿಗಳಿಗೆ ಸಂಬಂಧಿಸಿದ ಸೂಕ್ಷ್ಮ ಡೇಟಾವನ್ನು ಹ್ಯಾಕ್ ಮಾಡಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಸೇನೆಯು ಈ ಕುರಿತು ಎಕ್ಸ್ನಲ್ಲಿ ಮಾಹಿತಿ ನೀಡಿದೆ. ಪಾಕಿಸ್ತಾನ ಸೈಬರ್ ಫೋರ್ಸ್ ಹ್ಯಾಕರ್ಗಳು ಮಿಲಿಟರಿ ಎಂಜಿನಿಯರ್ ಸರ್ವೀಸಸ್ ಮತ್ತು ಮನೋಹರ್ ಪರಿಕ್ಕರ್ ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್ನ ಸೂಕ್ಷ್ಮ ದತ್ತಾಂಶಗಳನ್ನು ಹ್ಯಾಕ್ ಮಾಡಿರುವುದಾಗಿ ಹೇಳಿದೆ.
ಇದಲ್ಲದೆ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ವಲಯದ ಉದ್ಯಮವಾದ ಆರ್ಮರ್ಡ್ ವೆಹಿಕಲ್ ನಿಗಮ್ ಲಿಮಿಟೆಡ್ನ ಅಧಿಕೃತ ವೆಬ್ಸೈಟ್ ಅನ್ನು ವಿರೂಪಗೊಳಿಸಲು ಹ್ಯಾಕರ್ಗಳ ಗುಂಪು ಪ್ರಯತ್ನಿಸಿದೆ. ಪಾಕಿಸ್ತಾನ ಧ್ವಜ ಮತ್ತು ಅಲ್ ಖಾಲಿದ್ ಟ್ಯಾಂಕ್ ಬಳಸಿ ವೆಬ್ಸೈಟ್ ಅನ್ನು ವಿರೂಪಗೊಳಿಸಲಾಗಿದೆ ಎಂದು ಹೇಳಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ವಿರೂಪಗೊಳಿಸುವ ಪ್ರಯತ್ನದಿಂದ ಉಂಟಾದ ಸಂಭಾವ್ಯ ಹಾನಿ ಪ್ರಮಾಣ ನಿರ್ಣಯಿಸಲು ಮತ್ತು ವೆಬ್ಸೈಟ್ ಸಂಪೂರ್ಣ ಆಡಿಟ್ಗಾಗಿ ಆರ್ಮರ್ಡ್ ವೆಹಿಕಲ್ ನಿಗಮ್ ಲಿಮಿಟೆಡ್ನ ವೆಬ್ಸೈಟ್ ಅನ್ನು ಆಫಲೈನ್ನಲ್ಲಿರಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಹೆಚ್ಚುವರಿ ಸೈಬರ್ ದಾಳಿಗಳನ್ನು ಪತ್ತೆಹಚ್ಚಲು ಸೈಬರ್ ಭದ್ರತಾ ತಜ್ಞರು ಮತ್ತು ಏಜೆನ್ಸಿಗಳು ಸೈಬರ್ಸ್ಪೇಸ್ ಅನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಸೈಬರ್ ದಾಳಿಕೋರರಿಂದ ಉಂಟಾಗುವ ಸಾಂಭವ್ಯ ಅಪಾಯಗಳನ್ನು ತ್ವರಿತವಾಗಿ ಗುರುತಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.







