ಕಾಶ್ಮೀರವಲ್ಲದೆ ಇತರೆ ವಿಷಯಗಳ ಕುರಿತೂ ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧ: ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್ ದರ್

Credit: Reuters File Photo
ಇಸ್ಲಾಮಾಬಾದ್: ಕಾಶ್ಮೀರವಲ್ಲದೆ ಉಳಿದ ಎಲ್ಲ ಬಾಕಿ ವಿಷಯಗಳ ಕುರಿತೂ ಭಾರತದೊಂದಿಗೆ ಸಮಗ್ರ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧವಿದೆ ಎಂದು ಶುಕ್ರವಾರ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದರ್ ಘೋಷಿಸಿದ್ದಾರೆ.
ಇಸ್ಲಾಮಾಬಾದ್ ನ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ದರ್, “ಮಾತುಕತೆ ಯಾವಾಗಲೇ ನಡೆದರೂ, ಕಾಶ್ಮೀರ ಮಾತ್ರವಲ್ಲದೆ ಎಲ್ಲ ವಿಷಯಗಳ ಕುರಿತೂ ನಡೆಯಲಿದೆ” ಎಂದು ಸ್ಪಷ್ಟಪಡಿಸಿದರು.
ಆದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಾಗೂ ಭಯೋತ್ಪಾದನಾ ವಿಷಯದ ಕುರಿತು ಮಾತ್ರ ತಾನು ಚರ್ಚಿಸಲು ಸಿದ್ಧ ಎಂದು ಭಾರತ ಸ್ಪಷ್ಟಪಡಿಸಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಯಾವುದೇ ಒಂದು ಕಾರ್ಯಸೂಚಿಯ ಮೇಲೆ ಭಾರತದೊಂದಿಗೆ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ ಎಂದು ಪಾಕಿಸ್ತಾನದ ಉಪ ಪ್ರಧಾನಿಯೂ ಆದ ದರ್ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನ ಯಾವುದೇ ಮಧ್ಯಸ್ಥಿಕೆಯನ್ನು ಕೋರಲಿಲ್ಲ ಆದರೆ, ಪಾಕಿಸ್ತಾನಕ್ಕೆ ತಟಸ್ಥ ಸ್ಥಳದಲ್ಲಿ ಮಾತುಕತೆ ಏರ್ಪಡಿಸುವ ಆಮಂತ್ರಣ ಬಂದಿತು. ನಮಗೆ ಒಂದು ತಟಸ್ಥ ಸ್ಥಳದಲ್ಲಿ ಕೂತು ಮಾತುಕತೆ ನಡೆಸುವಂತೆ ಸೂಚಿಸಲಾಯಿತು. ವಿಷಯ ಇದಾದರೆ, ನಾವು ಭೇಟಿಯಾಗಲು ಸಿದ್ಧರಿದ್ದೇವೆ ಎಂದು ನಾನು ತಿಳಿಸಿದೆ ಎಂದೂ ಅವರು ಹೇಳಿದ್ದಾರೆ.
ಇದೇ ವೇಳೆ, ಕದನ ವಿರಾಮ ಮಾಡಿಕೊಳ್ಳುವಂತೆ ನಾನು ಅಮೆರಿಕದಿಂದ ಕರೆ ಸ್ವೀಕರಿಸಿದ್ದೆ ಎಂದು ಅವರು ಇದೇ ಪ್ರಥಮ ಬಾರಿಗೆ ದೃಢಪಡಿಸಿದ್ದಾರೆ.







