ಯುದ್ಧಭೀತಿ?: ಪಿಓಕೆಗೆ ಎಲ್ಲಾ ವಿಮಾನಗಳ ಹಾರಾಟ ರದ್ದುಪಡಿಸಿದ ಪಾಕ್

ಸಾಂದರ್ಭಿಕ ಚಿತ್ರ | PC :hindustantimes.com
ಹೊಸದಿಲ್ಲಿ: ಭಾರತೀಯ ವಾಯುಯಾನ ಸಂಸ್ಥೆಗಳ ಮಾಲಕತ್ವದ ಹಾಗೂ ನಿರ್ವಹಣೆಯ ಎಲ್ಲಾ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಈಗಾಗಲೇ ಮುಚ್ಚುಗಡೆಗೊಳಿಸಿರುವ ಪಾಕಿಸ್ತಾನವು, ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪ್ರಯಾಣಿಸುವ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತವು ಸೇನಾ ಕಾರ್ಯಾಚರಣೆ ನಡೆಸಬಹುದೆಂಬ ಆತಂಕದಿಂದ ಇಸ್ಲಾಮಾಬಾದ್ ಈ ಕ್ರಮವನ್ನು ಕೈಗೊಂಡಿದೆ.
ಪಾಕಿಸ್ತಾನ್ ಇಂಟರ್ನ್ಯಾಶನಲ್ ಏರ್ಲೈನ್ಸ್ (ಪಿಐಎ), ಗಿಲ್ಗಿಟ್ ಹಾಗೂ ಸ್ಕಾರ್ಡುವಿನಲ್ಲಿರುವ ಎಲ್ಲಾ ವಿಮಾನಗಳ ಹಾರಾಟವನ್ನು ಬುಧವಾರದಿಂದ ರದ್ದುಪಡಿಸಲಾಗಿದೆ.ಕರಾಚಿ ಹಾಗೂ ಲಾಹೋರ್ನಿಂದ ತಲಾ ಒಂದು ಮತ್ತು ಇಸ್ಲಾಮಾಬದ್ನಿಂದ ಎರಡು ಸೇರಿದಂತೆ ಸ್ಕಾರ್ಡುವಿಗೆ ತೆರಳುವ ನಾಲ್ಕು ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.
ಇಸ್ಲಾಮಾಬಾದ್ನಿಂದ ಗಿಲ್ಗಿಟ್ ಗೆ ತೆರಳುವ ಇತರ ನಾಲ್ಕು ವಿಮಾನಗಳ ಹಾರಾಟವನ್ನು ಕೂಡಾ ರದ್ದುಪಡಿಸಲಾಗಿದೆಯೆಂದು ಪಾಕಿಸ್ತಾನದ ಉರ್ದು ದೈನಿಕ ಜಂಗ್ ವರದಿ ಮಾಡಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ ಹಾಗೂ ದೇಶದ ವಾಯುಕ್ಷೇತ್ರ ಸುರಕ್ಷಿತವಾಗಿರುವುದನ್ನು ಖಾತರಿಪಡಿಸುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆಯೆಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ.





