ಪಾಕ್ ವಿಮಾನಗಳಿಗೆ ವಾಯುಪ್ರದೇಶ ಮುಚ್ಚುಗಡೆ; ಒಂದು ತಿಂಗಳು ವಿಸ್ತರಣೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜು. 23: ಪಾಕಿಸ್ತಾನಿ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚುಗಡೆಯನ್ನು ಭಾರತವು ಇನ್ನೊಂದು ತಿಂಗಳು ವಿಸ್ತರಿಸಿದೆ. ವಾಯುಪ್ರದೇಶ ಮುಚ್ಚುಗಡೆಯು ಆಗಸ್ಟ್ 24ರವರೆಗೆ ಜಾರಿಯಲ್ಲಿರುತ್ತದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಎಪ್ರಿಲ್ 22ರಂದು ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿದ ದಾಳಿಯ ಬಳಿಕ, ಪಾಕಿಸ್ತಾನಿ ಯುದ್ಧ ವಿಮಾನಗಳು ಸೇರಿದಂತೆ ಪಾಕಿಸ್ತಾನಿ ಏರ್ ಲೈನ್ ಗಳು ಮತ್ತು ಆಪರೇಟರ್ಗಳು ನಡೆಸುವ, ಅವರ ಒಡೆತನದ ಮತ್ತು ಅವರು ಲೀಸ್ ನಲ್ಲಿ ನಡೆಸುವ ವಿಮಾನಗಳಿಗೆ ಭಾರತವು ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ಅದು ಎಪ್ರಿಲ್ 30ರಿಂದ ಜಾರಿಗೆ ಬಂದಿದೆ.
‘‘ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸದಂತೆ ಪಾಕಿಸ್ತಾನಿ ವಿಮಾನಗಳನ್ನು ನಿರ್ಬಂಧಿಸಿ ಏರ್ ಮನ್ ಗೆ ನೀಡಿರುವ ನೋಟಿಸನ್ನು ಅಧಿಕೃತವಾಗಿ ಆಗಸ್ಟ್ 24ರವರೆಗೆ ವಿಸ್ತರಿಸಲಾಗಿದೆ’’ ಎಂದು ನಾಗರಿಕ ವಾಯುಯಾನ ಖಾತೆಯ ಸಹಾಯಕ ಸಚಿವ ಮುರಳೀಧರ್ ಮೊಹೊಲ್ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಮಂಗಳವಾರ ಹಾಕಿದ ಸಂದೇಶವೊಂದರಲ್ಲಿ ತಿಳಿಸಿದ್ದಾರೆ.
ಆರಂಭದಲ್ಲಿ ನಿರ್ಬಂಧವು ಮೇ 24ರಂದು ಕೊನೆಗೊಳ್ಳಬೇಕಾಗಿತ್ತು. ಬಳಿಕ ಅದನ್ನು ಜೂನ್ 24ರವರೆಗೆ ಹಾಗೂ ನಂತರ ಜುಲೈ 24ರವರೆಗೆ ವಿಸ್ತರಿಸಲಾಗಿತ್ತು.







