ಚಿನಾಬ್ ನದಿಯ ಬಾಗ್ಲಿಹಾರ್ ಅಣೆಕಟ್ಟಿನಿಂದ ಪಾಕ್ಗೆ ನೀರಿನ ಹರಿವನ್ನು ನಿಲ್ಲಿಸಿದ ಭಾರತ

PC : PTI
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಚಿನಾಬ್ ನದಿಯ ಬಾಗ್ಲಿಹಾರ್ ಅಣೆಕಟ್ಟಿನ ಮೂಲಕ ಪಾಕಿಸ್ತಾನಕ್ಕೆ ನೀರಿನ ಹರಿವನ್ನು ಕಡಿತಗೊಳಿಸಿದೆ ಎಂದು ವರದಿಗಳು ತಿಳಿಸಿವೆ.
ಎ.22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ಸರಣಿ ರಾಜತಾಂತ್ರಿಕ ಕ್ರಮಗಳ ಭಾಗವಾಗಿ ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಭಾರತವು ಚಿನಾಬ್ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಬಾಗ್ಲಿಹಾರ್ ಅಣೆಕಟ್ಟಿನ ಮೂಲಕ ನೀರಿನ ಹರಿವನ್ನು ಸ್ಥಗಿತಗೊಳಿಸಿದೆ ಮತ್ತು ಝೀಲಂ ನದಿಯ ಕಿಶನಗಂಗಾ ಅಣೆಕಟ್ಟಿನಲ್ಲಿಯೂ ಇಂತಹುದೇ ಕ್ರಮಗಳನ್ನು ಕೈಗೊಳ್ಳಲು ಯೋಜಿಸುತ್ತಿದೆ ಎಂದು ಬೆಳವಣಿಗೆಯನ್ನು ಬಲ್ಲ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.
ಜಮ್ಮುವಿನ ರಂಬನ್ನಲ್ಲಿರುವ ಬಾಗ್ಲಿಹಾರ ಜಲವಿದ್ಯುತ್ ಅಣೆಕಟ್ಟು ನೀರು ಬಿಡುಗಡೆಯ ಸಮಯವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಭಾರತಕ್ಕೆ ಒದಗಿಸಿದೆ. ಉತ್ತರ ಕಾಶ್ಮೀರದಲ್ಲಿರುವ ಕಿಶನಗಂಗಾ ಜಲವಿದ್ಯುತ್ ಅಣೆಕಟ್ಟಿನಲ್ಲಿಯೂ ಇದೇ ರೀತಿಯ ಕ್ರಮಗಳನ್ನು ಭಾರತವು ಪರಿಶೀಲಿಸುತ್ತಿದೆ. ಅಲ್ಪಾವಧಿಯ ದಂಡನಾತ್ಮಕ ಕ್ರಮವಾಗಿ ಪಾಕಿಸ್ತಾನದ ಪಂಜಾಬಿಗೆ ನೀರಿನ ಹರಿವನ್ನು ನಿರ್ಬಂಧಿಸಲು ಬಾಗ್ಲಿಹಾರ್ ಅಣೆಕಟ್ಟಿನಿಂದ ನೀರನ್ನು ಹೊರಕ್ಕೆ ಬಿಡುವ ತೂಬುಗಳ ದ್ವಾರಗಳನ್ನು ಕೆಳಕ್ಕಿಳಿಸಲಾಗಿದೆ ಎಂದು ತಿಳಿಸಿದ ಹಿರಿಯ ಅಧಿಕಾರಿಯೋರ್ವರು,‘ಹೀಗೆ ಮಾಡುವುದರಿಂದ ನಿರ್ಬಂಧ ಅಲ್ಪಕಾಲಿಕವಾಗಿದ್ದರೂ ನಾವು ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿದ್ದೇವೆ ಎನ್ನುವುದನ್ನು ತೋರಿಸುತ್ತಿದ್ದೇವೆ. ಚಿನಾಬ್ ನದಿಯು ಪಂಜಾಬಿನ ಕೃಷಿ ಭೂಮಿಗೆ ನೀರುಣಿಸುತ್ತದೆ ಮತ್ತು ನಾವು ಅವರನ್ನು ಎಲ್ಲ ರಂಗಗಳಲ್ಲಿಯೂ ಶಿಕ್ಷಿಸಲು ಬಯಸಿದ್ದೇವೆ ಎನ್ನುವುದನ್ನು ಪಾಕಿಸ್ಥಾನವು ಅರಿತುಕೊಳ್ಳುವ ಅಗತ್ಯವಿದೆ ’ ಎಂದರು. ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸಿಂಧೂ ಜಲ ಒಪ್ಪಂದವು 1960ರಿಂದ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರಿನ ಬಳಕೆಯನ್ನು ನಿಯಂತ್ರಿಸುತ್ತದೆ.







