ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಪಾಕ್-ಸೌದಿ ಸಹಿ

PC : X/@KSAmofaEN
ರಿಯಾದ್: ಪಾಕಿಸ್ತಾನ ಮತ್ತು ಸೌದಿ ಅರೆಬಿಯಾ ಹೊಸ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದು ಇದರಡಿ ಎರಡೂ ದೇಶಗಳಲ್ಲಿ ಯಾವುದೇ ಒಂದು ದೇಶದ ವಿರುದ್ಧದ ದಾಳಿಯನ್ನು ಇಬ್ಬರ ವಿರುದ್ಧದ ಆಕ್ರಮಣಶೀಲತೆಯೆಂದು ಪರಿಗಣಿಸಲಾಗುವುದು ಎಂದು ಮೂಲಗಳು ಹೇಳಿವೆ.
ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದ ಎಂದು ಹೆಸರಿಸಲಾದ ಒಪ್ಪಂದಕ್ಕೆ ರಿಯಾದ್ನಲ್ಲಿ ಸೌದಿ ಅರೆಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮತ್ತು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ಸಹಿ ಹಾಕಿದ್ದಾರೆ. ಈ ಒಪ್ಪಂದವು ಉಭಯ ದೇಶಗಳ ನಡುವೆ ರಕ್ಷಣಾ ಸಹಕಾರದ ಅಂಶಗಳನ್ನು ಅಭಿವೃದ್ಧಿಪಡಿಸಲು ಮತ್ತು ಯಾವುದೇ ಆಕ್ರಮಣಶೀಲತೆಯ ವಿರುದ್ಧ ಜಂಟಿ ತಡೆಗಟ್ಟುವಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ' ಎಂದು ಸೌದಿ ಪ್ರೆಸ್ ಏಜೆನ್ಸಿಯನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ನಾಲ್ಕು ದಿನಗಳ ಮಿಲಿಟರಿ ಸಂಘರ್ಷದ ಕೆಲ ತಿಂಗಳ ಬಳಿಕ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ನೇಟೋ ಶೈಲಿಯ ರಕ್ಷಣಾ ಒಪ್ಪಂದ ಮತ್ತು `ಒಬ್ಬರ ಮೇಲೆ ದಾಳಿಯು ಇಬ್ಬರ ಮೇಲೆಯೂ ಆಕ್ರಮಣಕ್ಕೆ ಸಮ' ಎಂಬ ಉಲ್ಲೇಖವನ್ನು ಪ್ರಮುಖ ರಾಜತಾಂತ್ರಿಕ ಗೆಲುವೆಂದು ಪಾಕಿಸ್ತಾನ ಪರಿಗಣಿಸಿದ್ದು ಈ ಒಪ್ಪಂದವನ್ನು ಭಾರತದ ವಿರುದ್ಧದ ಕಾರ್ಯತಂತ್ರದ ನಿರೋಧಕ ವ್ಯವಸ್ಥೆಯೆಂದು ಪ್ರತಿಪಾದಿಸಿದೆ.
ಇದರ ಜೊತೆಗೆ, ಖತರ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಕೆಲ ದಿನಗಳ ಬಳಿಕ ಸಹಿ ಹಾಕಲಾದ ಒಪ್ಪಂದದ ಮೂಲಕ ಇಸ್ರೇಲ್ಗೆ ಸಂದೇಶ ರವಾನಿಸುವ ಉದ್ದೇಶವೂ ಇದೆ . ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮಾತ್ರ ಪರಮಾಣು ಶಕ್ತ ದೇಶವಾಗಿದೆ. ಈಗ ಪರಮಾಣು ಶಕ್ತ ಪಾಕಿಸ್ತಾನ ಮತ್ತು ಸೌದಿ ನಡುವಿನ ಒಪ್ಪಂದವು ವಿಶಾಲವಾದ ಇಸ್ಲಾಮಿಕ್ ಬಣದ ಒಗ್ಗಟ್ಟಿನ ಸಂದೇಶ ರವಾನಿಸಿದೆ ಎಂದು ವಿಶ್ಲೇಷಿಸಲಾಗಿದೆ.
ಪರಿಣಾಮಗಳನ್ನು ಅಧ್ಯಯನ ಮಾಡುತ್ತೇವೆ: ಭಾರತ ಪ್ರತಿಕ್ರಿಯೆ
ಸೌದಿ ಅರೆಬಿಯಾ ಮತ್ತು ಪರಮಾಣು ಶಕ್ತ ರಾಷ್ಟ್ರ ಪಾಕಿಸ್ತಾನದ ನಡುವೆ ಸಹಿ ಮಾಡಿದ ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದದ ಪರಿಣಾಮಗಳನ್ನು ಅಧ್ಯಯನ ಮಾಡುವುದಾಗಿ ಭಾರತ ಪ್ರತಿಕ್ರಿಯಿಸಿದೆ.
ಇದರಡಿ ಈ ಎರಡು ದೇಶಗಳಲ್ಲಿ ಯಾವುದಾದರೂ ಒಂದು ದೇಶದ ಮೇಲೆ ನಡೆಯುವ ದಾಳಿಯನ್ನು ಎರಡೂ ದೇಶಗಳ ಮೇಲೆ ನಡೆಯುವ ಆಕ್ರಮಣವೆಂದು ಪರಿಗಣಿಸಲಾಗುತ್ತದೆ.
ದಿಲ್ಲಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ` ಸೌದಿ ಅರೆಬಿಯಾ ಮತ್ತು ಪಾಕಿಸ್ತಾನದ ನಡುವೆ ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿರುವ ವರದಿಯನ್ನು ಗಮನಿಸಿದ್ದೇವೆ. ಉಭಯ ದೇಶಗಳ ನಡುವಿನ ದೀರ್ಘಕಾಲದ ವ್ಯವಸ್ಥೆಯನ್ನು ಔಪಚಾರಿಕಗೊಳಿಸುವ ಈ ಬೆಳವಣಿಗೆಯು ಪರಿಗಣನೆಯಲ್ಲಿದೆ ಎಂಬುದು ಸರಕಾರಕ್ಕೆ ತಿಳಿದಿತ್ತು' ಎಂದಿದ್ದಾರೆ.







