ಪಾಕಿಸ್ತಾನವು ಭಾರತದ ಮೇಲಿನ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿಲ್ಲ ಎಂಬಂತೆ ನಟಿಸೋದು ಬೇಡ: ಎಸ್.ಜೈಶಂಕರ್

Photo: NDTV
ಹೊಸದಿಲ್ಲಿ: ಭಾರತದ ಮೇಲಿನ ಭಯೋತ್ಪಾದಕ ದಾಳಿಗಳಲ್ಲಿ ಪಾಕಿಸ್ತಾನವು ಭಾಗಿಯಾಗಿಲ್ಲ ಎಂಬಂತೆ ನಟಿಸುವುದನ್ನು ನಿಲ್ಲಿಸಿ; ಇದು ತನ್ನ ನೆಲದಿಂದ ಯಾವುದೇ ಭಯೋತ್ಪಾದಕ ಗುಂಪುಗಳು ಕಾರ್ಯಾಚರಿಸುತ್ತಿರುವುದು ತನಗೆ ಗೊತ್ತಿಲ್ಲ ಎಂಬ ಪಾಕ್ ಹೇಳಿಕೆ ಕುರಿತು ಡಚ್ ದೈನಿಕ ‘ದ ವೋಕ್ಸ್ಕ್ರಾಂತ್’ನ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಬುಧವಾರ ನೀಡಿದ ಸ್ಪಷ್ಟ ಉತ್ತರ.
ಐರೋಪ್ಯ ಒಕ್ಕೂಟದಲ್ಲಿ ಭಾರತದ ಎರಡನೇ ಅತಿದೊಡ್ಡ ಪಾಲುದಾರ ದೇಶವಾಗಿರುವ ನೆದರ್ಲ್ಯಾಂಡ್ಸ್ನ ಜೊತೆ ಸಂಬಂಧಗಳನ್ನು ಬಲಗೊಳಿಸಲು ಜೈಶಂಕರ್ ಆಮಸ್ಟರ್ಡ್ಯಾಮ್ಗೆ ಭೇಟಿ ನೀಡಿದ್ದು, ಈ ಸಂದರ್ಭ ಪಾಕಿಸ್ತಾನವನ್ನು ಭಯೋತ್ಪಾದನೆಯ ಕೇಂದ್ರ ಬಿಂದು ಎಂದು ಬಣ್ಣಿಸಿ ಡಿಸೆಂಬರ್ 2022ರಲ್ಲಿ ಅವರು ನೀಡಿದ್ದ ಹೇಳಿಕೆಯ ಕುರಿತು ಪ್ರಶ್ನಿಸಲಾಗಿತ್ತು. ‘ನಾನು ಅದನ್ನು ಸೂಚಿಸುತ್ತಿಲ್ಲ.ನಾನು ಅದನ್ನು ಹೇಳುತ್ತಿದ್ದೇನೆ ’ ಎಂದು ಜೈಶಂಕರ್ ಪ್ರತಿಕ್ರಿಯಿಸಿದರು.
ಆಮಸ್ಟರ್ಡ್ಯಾಮ್ ನ ಮಧ್ಯದಲ್ಲಿ ಮಿಲಿಟರಿ ಕೇಂದ್ರಗಳಿವೆ ಮತ್ತು ಅಲ್ಲಿ ಹತ್ತಾರು ಸಾವಿರ ಜನರು ಮಿಲಿಟರಿ ತರಬೇತಿಗಾಗಿ ಸಮಾವೇಶಗೊಳ್ಳುತ್ತಾರೆ ಎಂದು ಭಾವಿಸೋಣ. ನಿಮ್ಮ ಸರಕಾರಕ್ಕೆ ಇದರ ಬಗ್ಗೆ ಏನೂ ಗೊತ್ತಿಲ್ಲ ಎಂದು ನೀವು ಹೇಳುವಿರಾ ಎಂದು ಜೈಶಂಕರ್ ಪ್ರಶ್ನಿಸಿದರು.
‘ಏನು ನಡೆಯುತ್ತಿದೆ ಎನ್ನುವುದು ಪಾಕಿಸ್ತಾನಕ್ಕೆ ತಿಳಿದಿಲ್ಲ ಎಂಬ ನಿರೂಪಣೆಯನ್ನು ನಾವು ನಂಬಬಾರದು. ವಿಶ್ವಸಂಸ್ಥೆಯ ಪಟ್ಟಿಯಲ್ಲಿರುವ ಅತ್ಯಂತ ಕುಖ್ಯಾತ ಭಯೋತ್ಪಾದಕರು ಪಾಕಿಸ್ತಾನದಲ್ಲಿದ್ದಾರೆ. ಅವರು ಹಾಡಹಗಲೇ ದೊಡ್ಡ ನಗರಗಳಲ್ಲಿ ಕಾರ್ಯಾಚರಿಸುತ್ತಾರೆ. ಅವರ ವಿಳಾಸಗಳು, ಅವರ ಚಟುವಟಿಕೆಗಳು, ಅವರ ಪರಸ್ಪರ ಸಂಪರ್ಕಗಳು ಎಲ್ಲರಿಗೂ ತಿಳಿದಿವೆ. ಹೀಗಾಗಿ ಪಾಕಿಸ್ತಾನವು ಭಾಗಿಯಾಗಿಲ್ಲ ಎಂಬಂತೆ ನಟಿಸುವುದು ಬೇಡ. ಅದರಲ್ಲಿ ಸರಕಾರವು ಭಾಗಿಯಾಗಿದೆ. ಸೇನೆಯು ಕುತ್ತಿಗೆಯವರೆಗೆ ಮುಳುಗಿದೆ’ ಎಂದು ಜೈಶಂಕರ್ ಹೇಳಿದರು.
► ಪಾಕ್ ಸೇನಾ ಮುಖ್ಯಸ್ಥರ ತೀವ್ರ ಧಾರ್ಮಿಕ ದೃಷ್ಟಿಕೋನ
ಇದಕ್ಕೂ ಮುನ್ನ ಡಚ್ ಪ್ರಸಾರಕ ಎನ್ಒಎಸ್ ಜೊತೆ ಮಾತನಾಡಿದ್ದ ಜೈಶಂಕರ್, ಎ.22ರಂದು ಪಹಲ್ಗಾಮ್ ನಲ್ಲಿ ನಡೆದ ಬರ್ಬರ ದಾಳಿಯು ಪಾಕ್ ಜೊತೆ ಹಗೆತನಕ್ಕೆ ಕಾರಣವಾಗಿತ್ತು ಮತ್ತು ದಾಳಿಯ ಹಿಂದಿನ ಭಯೋತ್ಪಾದಕರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರ ‘ತೀವ್ರ ಧಾರ್ಮಿಕ ದೃಷ್ಟಿಕೋನ’ದಿಂದ ಪ್ರೇರಿತರಾಗಿದ್ದರು ಎಂದು ಹೇಳಿದ್ದರು.
ಇದನ್ನೇ ದ ವೋಕ್ಸ್ಕ್ರಾಂತ್ ಗೆ ಒತ್ತಿ ಹೇಳಿದ ಜೈಶಂಕರ್, ಪಹಲ್ಗಾಮ್ ಭಯೋತ್ಪಾದಕರು ಉದ್ದೇಶಪೂರ್ವಕವಾಗಿ ದಾಳಿಗೆ ಧಾರ್ಮಿಕ ಬಣ್ಣವನ್ನು ನೀಡಿದ್ದರು ಮತ್ತು ಜಗತ್ತು ಇಂತಹ ಆಚರಣೆಯನ್ನು ಒಪ್ಪಿಕೊಳ್ಳಬಾರದು ಎಂದರು.
►ಭಯೋತ್ಪಾದನೆ ಮತ್ತು ಕಾಶ್ಮೀರ ಎರಡೂ ಬೇರೆ ಬೇರೆ
ಭಯೋತ್ಪಾದನೆ ಮತ್ತು ಕಾಶ್ಮೀರ ಗಡಿ ಸಮಸ್ಯೆ ನಡುವೆ ನಂಟನ್ನು ನಿರಾಕರಿಸಿದ ಜೈಶಂಕರ್, ಭಯೋತ್ಪಾದನೆಯು ಎಳ್ಳಷ್ಟೂ ಸ್ವೀಕಾರಾರ್ಹವಲ್ಲದ ಅಂತರರಾಷ್ಟ್ರೀಯ ಅಪರಾಧವಾಗಿದ್ದು, ಅದನ್ನೆಂದಿಗೂ ಕ್ಷಮಿಸಬಾರದು ಎಂದು ಹೇಳಿದರು.
ಜಮ್ಮುಕಾಶ್ಮೀರಕ್ಕೆ ಸಂಬಂಧಿಸಿದಂತೆ ಅವರು, ‘1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಪ್ರತ್ಯೇಕಗೊಂಡಾಗ ಅದು ಭಾರತದಲ್ಲಿ ವಿಲೀನಗೊಂಡಿತ್ತು ಎನ್ನುವುದು ಐತಿಹಾಸಿಕ ಸತ್ಯವಾಗಿದೆ. ಅದನ್ನು ಭಾಗಶಃ ಅಕ್ರಮವಾಗಿ ಆಕ್ರಮಿಸಿಕೊಂಡಿರುವವರು ನಿಜವಾದ ಮಾಲಿಕನಿಗೆ, ಅಂದರೆ ನಮಗೆ ಮರಳಿಸಬೇಕು ಎನ್ನುವುದು ನಮ್ಮ ನಿಲುವಾಗಿದೆ ’ ಎಂದು ಹೇಳಿದರು.







