ಪಾಕ್ ಧ್ವಜಗಳನ್ನು ಮಾರಾಟ ಮಾಡದಂತೆ ಆನ್ ಲೈನ್ ಕಂಪೆನಿಗಳಿಗೆ ಸಿಸಿಪಿಎ ಆದೇಶ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಪಾಕಿಸ್ತಾನಿ ಧ್ವಜಗಳನ್ನು ಮಾರಾಟ ಮಾಡಿರುವ ಆನ್ ಲೈನ್ ಮಾರ್ಕೆಟಿಂಗ್ ಕಂಪೆನಿಗಳಾದ ಅಮೆಝಾನ್, ಫ್ಲಿಪ್ಕಾರ್ಟ್, ಯೂಬಯ್ ಇಂಡಿಯಾ, ಇಟಿಎಸ್ವೈ, ದಿ ಫ್ಲ್ಯಾಗ್ ಕಂಪೆನಿ ಹಾಗೂ ದಿ ಫ್ಲ್ಯಾಗ್ ಕಾರ್ಪೊರೇಶನ್ ಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಗುರುವಾರ ನೋಟಿಸ್ ಜಾರಿಗೊಳಿಸಿದೆ.
ಆನ್ ಲೈನ್ ಮಾರ್ಕೆಟಿಂಗ್ ಸಂಸ್ಥೆಗಳು ಇಂತಹ ಎಲ್ಲಾ ತರಹದ ಲಿಸ್ಟಿಂಗ್ ಗಳನ್ನು ತಕ್ಷಣವೇ ಕೈಬಿಡಬೇಕು ಹಾಗೂ ಭಾರತೀಯ ಕಾನೂನುಗಳ ಕಟ್ಟುನಿಟ್ಟಿನ ಅನುಸರಣೆಯಾಗುವಂತೆ ನೋಡಿಕೊಳ್ಳಬೇಕೆಂದು ಅದು ಆದೇಶಿಸಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳು ಹಾಗೂ ಆಹಾರ ಖಾತೆಯ ಸಚಿವ ಪ್ರಹ್ಲಾದ್ ಜೋಷಿ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಈ ರೀತಿಯ ‘ಸಂವೇದನಾ ರಾಹಿತ್ಯ’ವನ್ನು ಸಹಿಸಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ.
ಪಾಕಿಸ್ತಾನಿ ಚಿಹ್ನೆಗಳ ಆನ್ ಲೈನ್ ಮಾರಾಟವನ್ನು ನಿಷೇಧಿಸುವಂತೆ ಆಗ್ರಹಿಸಿ ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ)ವು ಕೇಂದ್ರ ಗೃಹ ಸಚಿವ ಪಿಯೂಶ್ ಗೋಯಲ್ ಅವರಿಗೆ ಪತ್ರ ಬರೆದಿತ್ತು. ‘ಆಪರೇಷನ್ ಸಿಂಧೂರ್’ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿರುವ ನಡುವೆ ಈ ಪತ್ರವನ್ನು ಮಂಗಳವಾರ ಕಳುಹಿಸಿಕೊಡಲಾಗಿದೆ.
ಭಾರತೀಯ ಸೈನಿಕರು ಮಹತ್ವದ ಕಾರ್ಯಾಚರಣೆಯೊಂದರಲ್ಲಿ ನಿರತರಾಗಿರುವಾಗ ದೇಶದಲ್ಲಿ ಪಾಕಿಸ್ತಾನಿ ಧ್ವಜಗಳು ಹಾಗೂ ಅದರ ಚಿಹ್ನೆಯಿರುವ ಮಗ್ ಮತ್ತು ಟೀಶರ್ಟ್ ಗಳ ಮಾರಾಟವು ತೀವ್ರ ಕಳವಳಕಾರಿಯಾಗಿದೆ ಎಂದು ಅದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿತ್ತು.







