ಗಡಿ ನಿಯಂತ್ರಣ ರೇಖೆ ದಾಟಿ ಬಂದ ಪಾಕ್ ಪ್ರಜೆ ವಶಕ್ಕೆ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಭಾರತೀಯ ಸೇನೆಯು ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಚಕ್ಕನ್ ಡ ಬಾಗ್ ಪ್ರದೇಶದಲ್ಲಿ ನಿಯಂತ್ರಣ ರೇಖೆಯನ್ನು ದಾಟಿ ಬಂದ ಪಾಕಿಸ್ತಾನಿ ರಾಷ್ಟ್ರೀಯನೊಬ್ಬನನ್ನು ಬಂಧಿಸಿದೆ.
26 ವರ್ಷದ ಬಂಧಿತನನ್ನು ಪ್ರಶ್ನಿಸಲಾಗುತ್ತಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯ ಬಳಿಕ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಈ ಬೆಳವಣಿಗೆ ಸಂಭವಿಸಿದೆ. ದಾಳಿಯಲ್ಲಿ 26 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದ ತರ್ಖಲ್ ಗ್ರಾಮದ ನಿವಾಸಿಯಾಗಿರುವ ವಕಾಸ್ ಎಂಬಾತ ನಿಯಂತ್ರಣ ರೇಖೆಯನ್ನು ದಾಟಿ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿದಾಗ ಆತನನ್ನು ಜಾಗೃತ ಸೇನಾ ಸಿಬ್ಬಂದಿ ವಶಕ್ಕೆ ತೆಗೆದುಕೊಂಡರು ಎಂದು ಅಧಿಕಾರಿಗಳು ತಿಳಿಸಿದರು.
ನಿಯಂತ್ರಣ ರೇಖೆಯ ಇನ್ನೊಂದು ಬದಿಯಲ್ಲಿರುವ ತನ್ನ ಗ್ರಾಮದಿಂದ ಯಾವುದೇ ಉದ್ದೇಶವಿಲ್ಲದೆ ಗಡಿಯನ್ನು ದಾಟಿರುವುದಾಗಿ ವಿಚಾರಣೆಯ ವೇಳೆ ವಕಾಸ್ ತಿಳಿಸಿರುವುದಾಗಿ ಹೇಳಲಾಗಿದೆ. ಬಂಧನದ ವೇಳೆ ಆತನ ಬಳಿ ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.





