ದಿಲ್ಲಿಯಲ್ಲಿ ಎರಡನೇ ಮದುವೆ ಆರೋಪ: ಪಾಕಿಸ್ತಾನಿ ಮಹಿಳೆಯಿಂದ ಪ್ರಧಾನಿ ಮೋದಿ ಅವರಿಗೆ ಮನವಿ

PC | ndtv
ಹೊಸದಿಲ್ಲಿ: ದಿಲ್ಲಿಯಲ್ಲಿ ತಮ್ಮ ಪತಿ ಎರಡನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಪಾಕಿಸ್ತಾನಿ ಮಹಿಳೆ ನಿಕಿತಾ ನಾಗ್ದೇವ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ನ್ಯಾಯ ದೊರಕಿಸಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಕರಾಚಿಯಿಂದ ಬಿಡುಗಡೆ ಮಾಡಿದ ಅವರ ಭಾವನಾತ್ಮಕ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಎರಡು ದೇಶಗಳಲ್ಲೂ ಚರ್ಚೆಗೆ ಕಾರಣವಾಗಿದೆ.
ಕರಾಚಿಯ ನಿಕಿತಾ, ಇಂದೋರ್ ನಲ್ಲಿ ವಾಸವಿರುವ ಪಾಕ್ ಮೂಲದ ವಿಕ್ರಮ್ ನಾಗ್ದೇವ್ ಅವರನ್ನು 2020ರ ಜನವರಿ 26ರಂದು ಹಿಂದೂ ಪದ್ಧತಿಯಲ್ಲಿ ವಿವಾಹವಾಗಿದ್ದರು. ಫೆಬ್ರವರಿಯಲ್ಲಿ ಭಾರತಕ್ಕೆ ಬಂದ ನಿಕಿತಾ, ಕೆಲವೇ ತಿಂಗಳಲ್ಲಿ 'ವಿಭಿನ್ನ' ಪರಿಸ್ಥಿತಿಯನ್ನು ಎದುರಿಸಬೇಕಾಯಿತು.
ಜುಲೈ 9, 2020 ರಂದು, ವೀಸಾ ತಾಂತ್ರಿಕ ಕಾರಣ ನೆಪವೊಡ್ಡಿ ಅಟ್ಟಾರಿ ಗಡಿಯಲ್ಲಿ ಪಾಕಿಸ್ತಾನಕ್ಕೆ ವಾಪಸ್ ಹೋಗುವಂತಾಯಿತು ಎಂದು ನಿಕಿತಾ ದೂರಿದ್ದಾರೆ. ಬಳಿಕ ವಿಕ್ರಮ್ ತಮ್ಮನ್ನು ಮರಳಿ ಕರೆಸಿಕೊಳ್ಳಲು ತೋರಿದ ನಿರ್ಲಕ್ಷ್ಯ ತೋರಿದರು ಎಂದು ಆರೋಪಿಸಿದ್ದಾರೆ.
ವಿಡಿಯೋದಲ್ಲಿ ಅವರು, “ಇಂದು ನ್ಯಾಯ ಸಿಗದಿದ್ದರೆ ಮಹಿಳೆಯರು ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ” ಎಂದು ಮನವಿ ಮಾಡಿದ್ದು, ದೈಹಿಕ–ಮಾನಸಿಕ ಕಿರುಕುಳ ಅನುಭವಿಸುತ್ತಿರುವ ಅನೇಕ ಮಹಿಳೆಯರ ಪರವಾಗಿ ಧ್ವನಿ ಎತ್ತಿದ್ದಾರೆ.
ಮದುವೆಯ ನಂತರ ಪತಿ ಸಂಬಂಧಿಕರೊಬ್ಬರೊಂದಿಗೆ ಸಂಬಂಧ ಹೊಂದಿದ್ದಾನೆಂಬ ಮಾಹಿತಿ ತಿಳಿದು ತಮಗೆ ಆಘಾತವಾಗಿದೆ ಎಂದು ಅವರು ಹೇಳಿದ್ದಾರೆ. “ಹುಡುಗರಿಗೆ ಇಂಥದ್ದು ಸಾಮಾನ್ಯ” ಎಂಬುದೇ ಮನೆಯವರ ಪ್ರತಿಕ್ರಿಯೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ತನ್ನನ್ನು ಪಾಕಿಸ್ತಾನಕ್ಕೆ ತೆರಳುವಂತೆ ಒತ್ತಾಯಿಸಿ, ಬಳಿಕ ಭಾರತ ಪ್ರವೇಶಕ್ಕೂ ಅಡ್ಡಿಪಡಿಸಿದ ಆರೋಪವನ್ನು ಕೂಡ ನಿಕಿತಾ ಮಾಡಿದ್ದಾರೆ. ಪತಿ ದಿಲ್ಲಿಯ ಮಹಿಳೆಯನ್ನು ಮದುವೆಯಾಗಲು ಸಿದ್ಧತೆ ನಡೆಸುತ್ತಿರುವ ಮಾಹಿತಿ ತಿಳಿದ ನಂತರ, ಅವರು 2025ರ ಜನವರಿ 27ರಂದು ಅಧಿಕೃತ ದೂರು ಸಲ್ಲಿಸಿದ್ದಾರೆ.
ಪ್ರಕರಣವನ್ನು ಪರಿಗಣಿಸಿದ ಸಿಂಧಿ ಪಂಚ ಮಧ್ಯಸ್ಥಿಕೆ ಕೇಂದ್ರವು ಮಧ್ಯಸ್ಥಿಕೆ ವಿಫಲವಾದ ಹಿನ್ನೆಲೆಯಲ್ಲಿ ವಿಕ್ರಮ್ ಅವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡುವಂತೆ ಶಿಫಾರಸು ಮಾಡಿದೆ. ಇಬ್ಬರೂ ಭಾರತೀಯ ನಾಗರಿಕರಲ್ಲದ ಕಾರಣ ಪ್ರಕರಣ ಪಾಕಿಸ್ತಾನದ ನ್ಯಾಯವ್ಯಾಪ್ತಿಗೆ ಸಂಬಂಧಿಸಿದೆ ಎಂದು ಕೇಂದ್ರದ ವರದಿ ಹೇಳಿದೆ.
ಇದೆ ವೇಳೆ, ಇಂದೋರ್ ಸಾಮಾಜಿಕ ಪಂಚಾಯತ್ ಕೂಡಾ ಈ ಪ್ರಕರಣವನ್ನು ಪರಿಶೀಲಿಸಿ ವಿಕ್ರಮ್ ವಿರುದ್ಧ ಕ್ರಮದ ಶಿಫಾರಸು ಮಾಡಿತ್ತು. ತನಿಖೆ ಮುಂದುವರಿಯಲಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆಶಿಷ್ ಸಿಂಗ್ ತಿಳಿಸಿದ್ದಾರೆ.







