ʼಶೆಲ್ಕಾಲ್ 500ʼ, ʼಪ್ಯಾನ್ ಡಿʼ ನಕಲಿ ಎಂದ DCGI: 49 ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲ!

PC: freepik.com
ಹೊಸದಿಲ್ಲಿ: ಹೇರಳವಾಗಿ ಬಳಸಲ್ಪಡುತ್ತಿದ್ದ ಕ್ಯಾಲ್ಸಿಯಂ ಮಾತ್ರೆ ಶೆಲ್ಕಾಲ್ 500(Shelcal 500) ಮತ್ತು ಪ್ಯಾನ್ ಡಿ(Pan D) ಸೇರಿದಂತೆ ನಾಲ್ಕು ಔಷಧಿಗಳನ್ನು ಕೇಂದ್ರ ಔಷಧ ನಿಯಂತ್ರಣ ಪ್ರಾಧಿಕಾರ ನಕಲಿ ಎಂದು ಗುರುತಿಸಿದೆ.
ಇದಲ್ಲದೆ 49 ಔಷಧಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ, ಇದರಲ್ಲಿ ವ್ಯಾಪಕವಾಗಿ ಬಳಸಲಾಗುವ ಪ್ಯಾರಸಿಟಮಾಲ್, ಆಕ್ಸಿಟೋಸಿನ್ ಮತ್ತು ಫ್ಲುಕೋನಜೋಲ್ ಸೇರಿವೆ. ಪ್ರಮಾಣಿತ ಗುಣಮಟ್ಟವನ್ನು ಹೊಂದಿಲ್ಲ ಎನ್ನಲಾದ ಈ ಔಷಧಿಗಳನ್ನು ಆಲ್ಕೆಮ್ ಹೆಲ್ತ್ ಸೈನ್ಸ್, ಅರಿಸ್ಟೊ ಫಾರ್ಮಾಸ್ಯುಟಿಕಲ್ಸ್, ಕ್ಯಾಮಿಲಾ ಫಾರ್ಮಾಸ್ಯುಟಿಕಲ್ಸ್, ಇನ್ನೋವಾ ಕ್ಯಾಪ್ಟನ್, ಹಿಂದೂಸ್ತಾನ್ ಆ್ಯಂಟಿಬಯೋಟಿಕ್ಸ್ ಮತ್ತು ಇಪ್ಕಾ ಲ್ಯಾಬೋರೇಟರೀಸ್ ನಂತಹ ಕಂಪನಿಗಳು ಉತ್ಪಾದಿಸಿದೆ ಎನ್ನಲಾಗಿದೆ.
ಕಳಪೆ ಔಷಧಿಗಳನ್ನು ಕಡಿಮೆ ಮಾಡಲು ತಪಾಸಣೆಗಳನ್ನು ನಡೆಸಲಾಗುತ್ತದೆ. ಪರೀಕ್ಷಿಸಲಾದ ಸುಮಾರು 3,000 ಮಾದರಿಗಳಲ್ಲಿ 49 ಔಷಧಗಳು ಕಡಿಮೆ ಪರಿಣಾಮಕಾರಿ (NSQ) ಎಂದು ಕಂಡು ಬಂದಿದೆ. ಪರಿಶೀಲನೆ ನಡೆಸಿದ ಒಟ್ಟು ಔಷಧಗಳ ಮಾದರಿಗಳಲ್ಲಿ ಸುಮಾರು 1.5 ಪ್ರತಿಶತದಷ್ಟು ಪ್ರಮಾಣಿತ ಗುಣಮಟ್ಟವಲ್ಲದ ಔಷಧವೆಂದು ಕಂಡುಬಂದಿದೆ ಎಂದು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ರಾಜೀವ್ ಸಿಂಗ್ ರಘುವಂಶಿ ಹೇಳಿದ್ದಾರೆ.
UrimaxD, Shelcal 500, Pan D, DecaDurabolin 25 Inj. ಔಷಧವನ್ನು ನಕಲಿ ಎಂದು ಡಿಸಿಜಿಐ ಪತ್ತೆ ಹಚ್ಚಿದೆ. ಇದಲ್ಲದೆ 49 ಬಗೆಯ ಔಷಧಿಗಳು ಪ್ರಮಾಣಿತ ಗುಣಮಟ್ಟವನ್ನು ಹೊಂದಿಲ್ಲ ಎಂದು ಹೇಳಿದೆ.
ಸೆಂಟ್ರಲ್ ಡ್ರಗ್ ರೆಗ್ಯುಲೇಟರಿ ಅಥಾರಿಟಿ ತನ್ನ ಆಗಸ್ಟ್ ವರದಿಯಲ್ಲಿ ವ್ಯಾಪಕವಾಗಿ ಬಳಸಲಾಗುವ ಪ್ಯಾರಸಿಟಮಾಲ್, ಪ್ಯಾನ್ ಡಿ, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಔಷಧಿಗಳು ಸೇರಿದಂತೆ 50ಕ್ಕೂ ಅಧಿಕ ಔಷಧಿಗಳು ಪ್ರಮಾಣಿತ ಗುಣಮಟ್ಟವನ್ನು ಹೊಂದಿಲ್ಲ ಎಂದು ಹೇಳಿತ್ತು.







