ಮಂಗಳಮುಖಿಯನ್ನು ವಿವಾಹವಾಗುವ ಪುತ್ರನ ನಿರ್ಧಾರದಿಂದ ಮನನೊಂದು ಹೆತ್ತವರು ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಅಮರಾವತಿ: ತಮ್ಮ 24 ವರ್ಷದ ಮಗ ತೃತೀಯ ಲಿಂಗಿ ವ್ಯಕ್ತಿಯೊಬ್ಬರನ್ನು ಮದುವೆಯಾಗುವುದನ್ನು ಸಹಿಸದೆ ಹೆತ್ತವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಿಂದ ವರದಿಯಾಗಿದೆ.
45 ವರ್ಷದ ಸುಬ್ಬ ರಾಯುಡು ಮತ್ತು ಅವರ 38 ವರ್ಷದ ಹೆಂಡತಿ ಸರಸ್ವತಿ ತಮ್ಮ ಮಗನ ನಿರ್ಧಾರದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಂದ್ಯಾಲ್ ಉಪವಿಭಾಗಾಧಿಕಾರಿ ಪಿ. ಶ್ರೀನಿವಾಸ ರೆಡ್ಡಿ ತಿಳಿಸಿದರು. ಅವರ ಮಗ ಸುನೀಲ್ ಕುಮಾರ್ ಮೂರು ವರ್ಷಗಳಿಂದ ಸ್ಥಳೀಯ ತೃತೀಯ ಲಿಂಗಿ ಸಮುದಾಯದೊಂದಿಗೆ ಸಂಪರ್ಕದಲ್ಲಿದ್ದರು ಎಂದು ಅವರು ಹೇಳಿದರು. ಇದೇ ಅವಧಿಯಲ್ಲಿ, ಕುಮಾರ್ ಓರ್ವ ತೃತೀಯ ಲಿಂಗಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಹಾಗೂ ತಾನು ಯಾವುದೇ ಮಹಿಳೆಯನ್ನು ಮದುವೆಯಾಗುವುದಿಲ್ಲ ಎಂದು ಘೋಷಿಸಿದ್ದರು ಎನ್ನಲಾಗಿದೆ.
ತಾನು ಪ್ರೀತಿಸುತ್ತಿದ್ದ ತೃತೀಯ ಲಿಂಗಿಯೊಂದಿಗೆ ವಾಸಿಸುವುದಾಗಿಯೂ ಅವರು ಹೇಳಿದ್ದರು. ಇದನ್ನು ಅವರ ಹೆತ್ತವರು ತೀವ್ರವಾಗಿ ವಿರೋಧಿಸಿದ್ದರು. ಹಾಗಾಗಿ, ಅವರ ನಡುವೆ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇದೇ ವಿಷಯದಲ್ಲಿ, ಮಗ ಕುಮಾರ್ ಕೂಡ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.





