ಬಿಹಾರ ಮತದಾರರ ಪಟ್ಟಿಗಳ ಪರಿಷ್ಕರಣೆ ವಿರುದ್ಧ ಪ್ರತಿಭಟನೆ; ದಿನದ ಮಟ್ಟಿಗೆ ಸಂಸತ್ ಮುಂದೂಡಿಕೆ

PC : PTI
ಹೊಸದಿಲ್ಲಿ: ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷ ಸಂಸದರು ಪ್ರತಿಭಟನೆ ನಡೆಸಿದ ಬಳಿಕ ಮಂಗಳವಾರ ಸಂಸತ್ತಿನ ಉಭಯ ಸದನಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಬಿಹಾರದಲ್ಲಿ ಮತದಾರರ ಪಟ್ಟಿಗಳ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ ಬಳಿಕ ಲೋಕಸಭೆಯನ್ನು ಮುಂದೂಡಲಾಯಿತು. ಚರ್ಚೆಗೆ ಆಗ್ರಹಿಸುತ್ತಿರುವ ಪ್ರತಿಪಕ್ಷ ಸದಸ್ಯರು ಇದೇ ವೇಳೆ ಸದನ ಕಲಾಪಕ್ಕೆ ವ್ಯತ್ಯಯವನ್ನುಂಟು ಮಾಡುವ ಮೂಲಕ ‘ಇಬ್ಬಗೆ ನೀತಿ’ಯನ್ನು ಅನುಸರಿಸುತ್ತಿದ್ದಾರೆ ಎಂದು ಸರಕಾರವು ಆರೋಪಿಸಿತು.
ಈ ವರ್ಷದ ಉತ್ತರಾರ್ಧದಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗವು ನಡೆಸುತ್ತಿರುವ ಎಸ್ಐಆರ್ ಕುರಿತು ಚರ್ಚೆಗೆ ಮತ್ತು ಅದನ್ನು ಹಿಂದೆಗೆದುಕೊಳ್ಳುವಂತೆ ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಸದನದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದರಿಂದ ಎರಡು ಬಾರಿ ಕಲಾಪಗಳನ್ನು ಮುಂದೂಡಲಾಗಿತ್ತು. ಅಪರಾಹ್ನ ಎರಡು ಗಂಟೆಗೆ ಸದನವು ಮರು ಸಮಾವೇಶಗೊಂಡಾಗ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಮತ್ತೆ ಪ್ರತಿಭಟಿಸಿದರು. ತಮ್ಮ ಆಸನಗಳಿಗೆ ಮರಳುವಂತೆ ಮತ್ತು ಸದನದ ಸುಗಮ ಕಾರ್ಯನಿರ್ವಹಣೆಗೆ ಅವಕಾಶ ನೀಡುವಂತೆ ಪೀಠದಲ್ಲಿದ್ದ ದಿಲೀಪ ಸೈಕಿಯಾ ಆಗ್ರಹಿಸಿದರೂ ಪ್ರತಿಭಟನೆ ಮುಂದುವರಿದಿತ್ತು.
ಪ್ರತಿಪಕ್ಷಗಳ ವರ್ತನೆಯನ್ನು ಖಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಅವರು, ಸೋಮವಾರ ನಡೆದ ಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ಆಪರೇಷನ್ ಸಿಂಧೂರ ಬಗ್ಗೆ ಚರ್ಚೆಗೆ ಒಪ್ಪಿಕೊಳ್ಳಲಾಗಿತ್ತು ಮತ್ತು ಅದಕ್ಕಾಗಿ ಸಮಯವನ್ನೂ ನಿಗದಿಗೊಳಿಸಲಾಗಿತ್ತು. ಚರ್ಚೆ ನಡೆಯಬೇಕಾದ ನಿಯಮವನ್ನು ಮಾತ್ರ ನಿರ್ಧರಿಸಲಾಗುತ್ತದೆ. ಪ್ರತಿಪಕ್ಷ ಸದಸ್ಯರು ಭಿತ್ತಿಪತ್ರಗಳೊಂದಿಗೆ ಇಲ್ಲಿ ಬರುತ್ತಾರೆ ಮತ್ತು ನಿಯಮಗಳನ್ನು ಉಲ್ಲಂಘಿಸುತ್ತಾರೆ. ನಾನಿದನ್ನು ಖಂಡಿಸುತ್ತೇನೆ ಎಂದು ಹೇಳಿದರು.
‘ಪ್ರತಿಪಕ್ಷಗಳು ಚರ್ಚೆಗೆ ಕೇಳುತ್ತಿವೆ ಮತ್ತು ನಾವು ಚರ್ಚೆಗೆ ಸಿದ್ಧರಿದ್ದೇವೆ, ಆದರೆ ಅವರು ಸದನವು ಕಾರ್ಯ ನಿರ್ವಹಿಸಲು ಅವಕಾಶ ನೀಡುತ್ತಿಲ್ಲ’ ಎಂದು ಪ್ರತಿಪಕ್ಷಗಳನ್ನು ತರಾಟೆಗೆತ್ತಿಕೊಂಡ ರಿಜಿಜು,ಅವರು ಚರ್ಚೆಗೆ ಆಗ್ರಹಿಸುತ್ತಾರೆ,ಇದೇ ವೇಳೆ ಹೀಗೆ ಗದ್ದಲವನ್ನು ಎಬ್ಬಿಸುತ್ತಾರೆ. ಇಂತಹ ಇಬ್ಬಗೆ ನೀತಿ ತಪ್ಪು ಎಂದರು. ಸರಕಾರವು ಚರ್ಚೆಗೆ ಸಿದ್ಧವಾಗಿದೆ,ಆದರೆ ಪ್ರತಿಪಕ್ಷಗಳು ಸಂಸತ್ತಿನ ಸಮಯವನ್ನು ವ್ಯರ್ಥಗೊಳಿಸುತ್ತಿವೆ ಎಂದೂ ಅವರು ಕುಟುಕಿದರು.
ಇದಕ್ಕೂ ಮುನ್ನ ಮಧ್ಯಾಹ್ನ 12 ಗಂಟೆಗೆ ಸದನವು ಮರು ಸಮಾವೇಶಗೊಂಡಾಗ ಪೀಠದಲ್ಲಿದ್ದ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಅವರು ತಮ್ಮ ಆಸನಗಳಿಗೆ ಮರಳುವಂತೆ ಮತ್ತು ಸದನವು ಕಾರ್ಯ ನಿರ್ವಹಿಸಲು ಅವಕಾಶ ನೀಡುವಂತೆ ಪ್ರತಿಭಟನಾನಿರತ ಸದಸ್ಯರನ್ನು ಆಗ್ರಹಿಸಿದರು.
ನಿಯಮಗಳಿಗೆ ಅನುಗುಣವಾಗಿ ಸ್ಪೀಕರ್ ಅನುಮತಿಸುವ ಯಾವುದೇ ವಿಷಯದಲ್ಲಿ ಚರ್ಚೆಗೆ ಸರಕಾರವು ಸಿದ್ಧವಾಗಿದೆ ಎಂದು ಹೇಳಿದ ಸಹಾಯಕ ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ ರಾಮ ಮೇಘ್ವಾಲ್ ಅವರೂ ತಮ್ಮ ಆಸನಗಳಿಗೆ ಮರಳುವಂತೆ ಪ್ರತಿಪಕ್ಷಗಳ ಸದಸ್ಯರನ್ನು ಕೋರಿಕೊಂಡರು. ಪ್ರತಿಭಟನೆ ನಿಲ್ಲದಿದ್ದಾಗ ಪಾಲ್ ಸದನವನ್ನು ಅಪರಾಹ್ನ ಎರಡು ಗಂಟೆಯವರೆಗೆ ಮುಂದೂಡಿದ್ದರು.
ಬೆಳಿಗ್ಗೆ 11 ಗಂಟೆಗೆ ಸದನವು ಸೇರಿದಾಗ ಪ್ರತಿಪಕ್ಷಗಳ ಸದಸ್ಯರು ಬಿಹಾರದಲ್ಲಿ ಎಸ್ಐಆರ್ ಮತ್ತು ಆಪರೇಷನ್ ಸಿಂಧೂರ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದರು. ಕೋಲಾಹಲ ಸೃಷ್ಟಿಯಾದಾಗ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ 12 ಗಂಟೆಯವರಗೆ ಮುಂದೂಡಿದ್ದರು.
ಸಂಸತ್ ಅಧಿವೇಶನದ ಮೊದಲ ದಿನವಾದ ಸೋಮವಾರವೂ ಆಪರೇಷನ್ ಸಿಂಧೂರ ಕುರಿತು ಚರ್ಚೆಗಾಗಿ ಪ್ರತಿಪಕ್ಷಗಳ ಪ್ರತಿಭಟನೆಗಳಿಂದಾಗಿ ಸದನವು ಕಾರ್ಯನಿರ್ವಹಿಸಲು ಸಾಧ್ಯವಾಗಿರಲಿಲ್ಲ.
ಅತ್ತ ಮಂಗಳವಾರ ರಾಜ್ಯಸಭೆಯಲ್ಲಿಯೂ ಪಹಲ್ಗಾಮ್ ದಾಳಿ,ಆಪರೇಷನ್ ಸಿಂಧೂರ ಮತ್ತು ಬಿಹಾರದಲ್ಲಿ ಎಸ್ಐಆರ್ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳ ಪ್ರತಿಭಟನೆಗಳಿಂದಾಗಿ ಭೋಜನ ವಿರಾಮಕ್ಕೆ ಮುನ್ನ ಸದನವನ್ನು ಎರಡು ಬಾರಿ ಮುಂದೂಡಲಾಗಿತ್ತು. ಸದನವು ಮರುಸಮಾವೇಶಗೊಂಡರೂ ಯಾವುದೇ ಕಲಾಪವನ್ನು ನಡೆಸಲು ಸಾಧ್ಯವಾಗದೆ ಅಂತಿಮವಾಗಿ ದಿನದ ಮಟ್ಟಿಗೆ ಮುಂದೂಡಲಾಯಿತು.







