ಸಂಸತ್ತಿನಲ್ಲಿ ಭದ್ರತಾ ಲೋಪ : ಆವರಣ ಗೋಡೆ ಹತ್ತಿದ ವ್ಯಕ್ತಿಯ ಬಂಧನ

PC : PTI
ಹೊಸದಿಲ್ಲಿ : ವ್ಯಕ್ತಿಯೋರ್ವ ಗೋಡೆ ಹತ್ತಿ ಸಂಸತ್ತಿನ ಆವರಣಕ್ಕೆ ಪ್ರವೇಶಿಸಿದ್ದು, ಶುಕ್ರವಾರ ಸಂಸತ್ತಿನಲ್ಲಿ ದೊಡ್ಡ ಭದ್ರತಾ ಲೋಪ ಸಂಭವಿಸಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಬೆಳಿಗ್ಗೆ 6.30ರ ಸುಮಾರಿಗೆ ವ್ಯಕ್ತಿಯೋರ್ವ ರೈಲ್ವೆ ಭವನ ಕಡೆಯಿಂದ ಗೋಡೆಯನ್ನು ಹತ್ತಿ ಸಂಸತ್ತಿನ ಗರುಡ ದ್ವಾರವನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾನೆ. ತಕ್ಷಣ ಭದ್ರತಾ ಸಿಬ್ಬಂದಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಮೂಲಗಳ ಪ್ರಕಾರ, ಸಂಸತ್ತಿಗೆ ಪ್ರವೇಶಿಸಲು ಯತ್ನಿಸಿದ ವ್ಯಕ್ತಿ ಉತ್ತರ ಪ್ರದೇಶದ ನಿವಾಸಿಯಾಗಿದ್ದು, ಗುಜರಾತ್ನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ವಿಚಾರಣೆಯ ಸಮಯದಲ್ಲಿ ಅಧಿಕಾರಿಗಳಿಗೆ ತಾನು ಮನೆಗೆ ಹೋಗಬೇಕಿತ್ತು. ಸಂಸತ್ತಿಗೆ ಬರುವ ಮೊದಲು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದೆ, ಆದರೆ ರೈಲು ಹತ್ತಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.
ಭದ್ರತಾ ಪಡೆಗಳು ವಿಚಾರಣೆಯನ್ನು ಪೂರ್ಣಗೊಳಿಸಿದ ನಂತರ ಆತನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





