ಬಿಹಾರ ಎಸ್ಐಆರ್, ಆಪರೇಷನ್ ಸಿಂಧೂರ ಚರ್ಚೆಗೆ ಪ್ರತಿಪಕ್ಷಗಳ ಪಟ್ಟು; ಮೂರನೇ ದಿನವೂ ಸಂಸತ್ ಸದನ ಮುಂದೂಡಿಕೆ

PC : PTI
ಹೊಸದಿಲ್ಲಿ,ಜು.23: ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆಗೆ ಬೇಡಿಕೆಯನ್ನು ಪುನರುಚ್ಚರಿಸಿ ಪ್ರತಿಪಕ್ಷ ಸಂಸದರು ಕಲಾಪಗಳಿಗೆ ಅಡ್ಡಿಯನ್ನು ಮುಂದುವರಿಸಿದ್ದರಿಂದ ಬುಧವಾರ ಸತತ ಮೂರನೇ ದಿನವೂ ಸಂಸತ್ತಿನ ಉಭಯ ಸದನಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಪ್ರತಿಪಕ್ಷಗಳ ಸದಸ್ಯರು ಭಿತ್ತಿಪತ್ರಗಳೊಂದಿಗೆ ಘೋಷಣೆಗಳನ್ನು ಕೂಗುತ್ತ ಲೋಕಸಭೆಯ ಬಾವಿಗೆ ನುಗ್ಗಿದ ಬಳಿಕ ಗದ್ದಲ ಸೃಷ್ಟಿಯಾಗಿತ್ತು. ಇದು ದಿನದ ಮಟ್ಟಿಗೆ ಕಲಾಪಗಳ ಮುಂದೂಡಿಕೆಗೆ ಕಾರಣವಾಯಿತು.
ಇದಕ್ಕೂ ಮುನ್ನ ಪ್ರತಿಪಕ್ಷ ಸದಸ್ಯರ ಪ್ರತಿಭಟನೆಗಳು ಮತ್ತು ಘೋಷಣೆಗಳಿಂದಾಗಿ ಕಲಾಪಗಳನ್ನು ಅಪರಾಹ್ನ ಎರಡು ಗಂಟೆಯವರೆಗೆ ಮುಂದೂಡಲಾಗಿತ್ತು. ಸದನವು ಮರುಸಮಾವೇಶಗೊಂಡ ಬಳಿಕವೂ ಪ್ರತಿಭಟನೆಗಳು ಮುಂದುವರಿದಿದ್ದರಿಂದ ಸ್ಪೀಕರ್ ಪೀಠದಲ್ಲಿದ್ದ ಟಿಡಿಪಿ ಸಂಸದ ಕೃಷ್ಣಪ್ರಸಾದ ತೆನ್ನೇಟಿಯವರು ಕಲಾಪಗಳನ್ನು ಮುಂದೂಡಿದರು.
ಪ್ರತಿಪಕ್ಷ ಸದಸ್ಯರು ‘ಎಸ್ಐಆರ್ ವಾಪಸ್ ಲೋ’ ಘೋಷಣೆಗಳನ್ನು ಕೂಗಿದ್ದರು. ಪ್ರತಿಭಟನಾನಿರತ ಸಂಸದರು ತಾವು ಬೀದಿಗಳಲ್ಲಿರುವಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದ ಸ್ಪೀಕರ್ ಓಂ ಬಿರ್ಲಾ, ಅವರ ವಿರುದ್ಧ ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುವುದು ತನಗೆ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ನಿಮ್ಮನ್ನು ಆಯ್ಕೆ ಮಾಡಿದ ಜನರ ಆಶಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನೀವು ನಡೆದುಕೊಳ್ಳಬೇಕು. ಆದರೆ ನೀವು ಸಂಸತ್ತಿನಲ್ಲಿ ಬೀದಿ ನಡವಳಿಕೆಯನ್ನು ತೋರಿಸುತ್ತಿದ್ದೀರಿ. ಇಂತಹ ನಡವಳಿಕೆ ಸಂಸದರಿಗೆ ತಕ್ಕದ್ದಲ್ಲ ಎಂದು ಹೇಳಿದರು. ತಮ್ಮ ಆಸನಗಳಿಗೆ ಮರಳುವಂತೆ ಪ್ರತಿಪಕ್ಷ ಸದಸ್ಯರಿಗೆ ಅವರು ಸೂಚಿಸಿದರೂ ಪ್ರತಿಭಟನೆ ಮುಂದುವರಿದಿತ್ತು.
ಅತ್ತ ರಾಜ್ಯಸಭೆಯೂ ಇಂತಹುದೇ ದೃಶ್ಯಗಳಿಗೆ ಸಾಕ್ಷಿಯಾಗಿತ್ತು. ಬುಧವಾರ ಅಪರಾಹ್ನ ಎರಡು ಗಂಟೆಗೆ ಎಲ್ಲ ಕಲಾಪಗಳನ್ನು ಸ್ಥಗಿತಗೊಳಿಸುವ ಮುನ್ನ ಎರಡು ಸಲ ಸದನವನ್ನು ಮುಂದೂಡಲಾಗಿತ್ತು.
ಬೆಳಿಗ್ಗೆ 11 ಗಂಟೆಗೆ ಸದನವು ಸಮಾವೇಶಗೊಂಡ ಬೆನ್ನಿಗೇ ಬಿಹಾರ ಎಸ್ಐಆರ್ ಸೇರಿದಂತೆ ವಿವಿಧ ವಿಷಯಗಳ ಮೇಲೆ ಚರ್ಚೆಗೆ ಆಗ್ರಹಿಸಿ ತಾವು ಸಲ್ಲಿಸಿದ್ದ ನಿಲುವಳಿ ಸೂಚನೆಗಳು ತಿರಸ್ಕೃತಗೊಂಡ ಬಳಿಕ ಪ್ರತಿಪಕ್ಷ ಸದಸ್ಯರು ಕೋಲಾಹಲವೆಬ್ಬಿಸಿದ್ದರಿಂದ ಕೆಲವೇ ನಿಮಿಷಗಳಲ್ಲಿ ಸದನವನ್ನು ಮುಂದೂಡಲಾಯಿತು.
ಕಲಾಪ ಪಟ್ಟಿಯನ್ನು ಮಂಡಿಸಿದ ಬಳಿಕ ಉಪಸಭಾಪತಿ ಹರಿವಂಶ ಅವರು ಎಸ್ಐಆರ್, ದಿಲ್ಲಿಯಲ್ಲಿ ಕೊಳಗೇರಿಗಳ ನೆಲಸಮ, ಇತರ ರಾಜ್ಯಗಳಲ್ಲಿ ಬಂಗಾಳಿ ವಲಸೆ ಕಾರ್ಮಿಕರ ವಿರುದ್ಧ ತಾರತಮ್ಯ ಮತ್ತು ವಾಯುಯಾನ ಸುರಕ್ಷತೆ ಮೇಲೆ ಚರ್ಚೆಗೆ ಒತ್ತಾಯಿಸಿ ನಿಯಮ 267ರಡಿ 25 ನೋಟಿಸ್ ಗಳನ್ನು ತಾನು ಸ್ವೀಕರಿಸಿದ್ದೇನೆ ಎಂದು ತಿಳಿಸಿದರು. ಆದಾಗ್ಯೂ ಪೀಠವು ಎಲ್ಲ ನಿಲುವಳಿ ಸೂಚನೆಗಳನ್ನು ತಿರಸ್ಕರಿಸಿದ್ದು ಪ್ರತಿಪಕ್ಷ ಸಂಸದರ ಪ್ರತಿಭಟನೆಗಳು ಮತ್ತು ಘೋಷಣೆಗಳಿಗೆ ಕಾರಣವಾಯಿತು.
ಕನಿಷ್ಠ ವೈಕೋ(ಎಂಡಿಎಂಕೆ) ಅವರ ಶೂನ್ಯವೇಳೆಯ ಪ್ರಶೆಯನ್ನು ಎತ್ತಲು ಅವಕಾಶ ನೀಡಿ, ಜು.24ರಂದು ಅವರ ರಾಜ್ಯಸಭಾ ಅಧಿಕಾರಾವಧಿ ಅಂತ್ಯಗೊಳ್ಳುತ್ತದೆ ಎಂದು ಹರಿವಂಶ ಸದನವನ್ನು ಆಗ್ರಹಿಸಿದರು.
ಪ್ರತಿಭಟನೆಗಳು ಮುಂದುವರಿಯುತ್ತಿದ್ದಂತೆ ವೈಕೋ ಅವರು ಶ್ರೀಲಂಕಾದಿಂದ ಭಾರತಿಯ ಮೀನುಗಾರರ ಬಂಧನದ ಹೆಚ್ಚುತ್ತಿರುವ ಘಟನೆಗಳನ್ನು ಪ್ರಸ್ತಾವಿಸಿದರು.
ಕೋಲಾಹಲದ ನಡುವೆಯೇ 11:10ರ ಸುಮಾರಿಗೆ ಸದನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು.
ಸದನವು ಮರುಸಮಾವೇಶಗೊಂಡಾಗ ಪೀಠದಲ್ಲಿದ್ದ ಘನಶ್ಯಾಮ ತಿವಾರಿಯವರು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳಲು ಸೂಚಿಸಿದರು. ಆದರೆ ಪ್ರತಿಪಕ್ಷ ಸದಸ್ಯರು ಎದ್ದುನಿಂತು ಎಸ್ಐಆರ್ ಕುರಿತು ಚರ್ಚೆಗೆ ಆಗ್ರಹಿಸಿದರು. ಪ್ರಶ್ನೋತ್ತರ ಅವಧಿ ಮುಂದುವರಿಯಲು ಅವಕಾಶ ನೀಡುವಂತೆ ಪೀಠದ ಮನವಿಯನ್ನು ಪ್ರತಿಪಕ್ಷ ಸದಸ್ಯರು ಕಡೆಗಣಿಸಿದ್ದು, ಸದನವನ್ನು ಅಪರಾಹ್ನ ಎರಡು ಗಂಟೆಯವರೆಗೆ ಮುಂದೂಡಲಾಯಿತು.
ಇದಕ್ಕೂ ಮುನ್ನ ತಿವಾರಿ ತನ್ನ ಪೂರಕ ಪ್ರಶ್ನೆಯನ್ನು ಕೇಳುವಂತೆ ಸಿಪಿಐ ಸದಸ್ಯ ಸಂದೋಷ ಕುಮಾರ್ಗೆ ಸೂಚಿಸಿದ್ದರು. ಆದರೆ ಅವರು ಎಸ್ಐಆರ್ ವಿಷಯವನ್ನೆತ್ತಲು ಆರಂಭಿಸಿದ್ದರು.
ಅಪರಾಹ್ನ ಎರಡು ಗಂಟೆಗೆ ಬಂದರು, ನೌಕಾ ಮತ್ತು ಜಲಮಾರ್ಗಗಳ ಸಚಿವ ಸರಬಾನಂದ ಸೋನೊವಾಲ್ ಅವರು ಸಮುದ್ರ ಮೂಲಕ ಸರಕುಗಳ ಸಾಗಣೆ ಮಸೂದೆ 2025ನ್ನು ಚರ್ಚೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಿದರು. ಆದರೂ ಪ್ರತಿಪಕ್ಷ ಸದಸ್ಯರು ಎಸ್ಐಆರ್ ವಿಷಯದಲ್ಲಿ ಚರ್ಚೆಗೆ ಆಗ್ರಹಿಸಿ ಪ್ರತಿಭನೆಯನ್ನು ಮುಂದುವರಿಸಿದರು. ಕೆಲವರು ಸದನದ ಬಾವಿಗೂ ನುಗ್ಗಿದ್ದರು.
ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾತನಾಡಲು ಅವಕಾಶ ನೀಡುವಂತೆಯೂ ಪ್ರತಿಪಕ್ಷ ಸಂಸದರು ಆಗ್ರಹಿಸಿದರು. ಪ್ರತಿಭಟನೆಗಳು ಮುಂದುವರಿದಾಗ ಪೀಠದಲ್ಲಿದ್ದ ಭುವನೇಶ್ವರ ಕಲಿಟಾ ಅವರು ಸದನವನ್ನು ದಿನದ ಮಟ್ಟಿಗೆ ಮುಂದೂಡಿದರು.







