ಸೆಂಗಾರ್ಗೆ ಜೀವಾವಧಿ ಶಿಕ್ಷೆ ಅಮಾನತು ವಿರೋಧಿಸಿ ಸಂಸತ್ ಭವನ ಮುಂದೆ ಪ್ರತಿಭಟನೆ; ಹಲವರ ಬಂಧನ

ಕುಲದೀಪ್ ಸಿಂಗ್ ಸೆಂಗಾರ್ | Photo Credit : PTI
ಹೊಸದಿಲ್ಲಿ, ಡಿ.28: ಉನ್ನಾವೊ ಅತ್ಯಾಚಾರ ಪ್ರಕರಣದ ದೋಷಿ ಕುಲದೀಪ್ ಸಿಂಗ್ ಸೆಂಗಾರ್ ನ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದಿಲ್ಲಿ ಹೈಕೋರ್ಟ್ ಆದೇಶವನ್ನು ವಿರೋಧಿಸಿ ಸಂಸತ್ಭವನದ ಸಮೀಪ ಶನಿವಾರ ಧರಣಿ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ್ತಿ ಯೋಗಿತಾ ಭಾಯಾನಾ, ಕಾಂಗ್ರೆಸ್ ನಾಯಕಿ ಮುಮ್ತಾಝ್ ಹಾಗೂ ಇತರ ಹಲವು ಪ್ರತಿಭಟನಕಾರರನ್ನು ದಿಲ್ಲಿ ಪೊಲೀಸರು ಶನಿವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ಸಂಜೆ ಸುಮಾರು 4 ಗಂಟೆಯ ವೇಳೆಗೆ ಸಂಸತ್ಭವನ ಸಮೀಪದ ರಸ್ತೆಯಲ್ಲಿ ನಿಂತು ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು, ಸೆಂಗಾರ್ ನ ಜೈಲು ಶಿಕ್ಷೆ ಅಮಾನತುಗೊಳಿಸಿದ ದಿಲ್ಲಿ ಹೈಕೋರ್ಟ್ನ ಆದೇಶವನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ಸಂಸತ್ ಭವನ ಸಮೀಪದ ಪ್ರದೇಶವು ಪ್ರತಿಭಟನೆಗಳನ್ನು ನಡೆಸುವಂತಿಲ್ಲವೆಂದು ಘೋಷಿಸಿದ ಪೊಲೀಸ್ ಸಿಬ್ಬಂದಿ, ಸ್ಥಳದಿಂದ ಚದುರುವಂತೆ ಪ್ರತಿಭಟನಕಾರರಿಗೆ ಸೂಚಿಸಿದರು. ಆದರೆ ಸ್ಥಳವನ್ನು ತೆರವುಗೊಳಿಸಲು ಪ್ರತಿಭಟನಕಾರರು ನಿರಾಕರಿಸಿದಾಗ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತೆಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ತಾಯಿ, ಅಖಿಲ ಭಾರತ ಪ್ರಜಾತಾಂತ್ರಿಕ ಮಹಿಳಾ ಸಂಘದ ಕಾರ್ಯಕರ್ತೆಯರು ಹಾಗೂ ಯೋಗಿ ಭಯಾನಾ ಜೊತೆ ಸೋಮವಾರ ದಿಲ್ಲಿ ಹೈಕೋರ್ಟ್ ಆವರಣದಲ್ಲಿ ಪ್ರತಿಭಟನೆ ನಡೆಸಿದ ಮರುದಿನವೇ ಪೊಲೀಸರು ಈ ಬಂಧನ ಕಾರ್ಯಾಚರಣೆ ನಡೆಸಿದ್ದಾರೆ.
ಸೆಂಗಾರ್ನ ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿರಿಸಿದ ಸುಪ್ರೀಂಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ತಾನು ಸುಪ್ರೀಂಕೋರ್ಟ್ ಮೆಟ್ಟಲೇರುವುದಾಗಿ ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ.
2017ರಲ್ಲಿ ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ತನಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿರುವುದನ್ನು ಪ್ರಶ್ನಿಸಿ ಬಿಜೆಪಿಯ ಉಚ್ಚಾಟಿತ ಸೆಂಗಾರ್ ಸಲ್ಲಿಸಿದ ಅರ್ಜಿಯ ವಿಚಾರಣೆ ಬಾಕಿಯುಳಿದಿರುವ ಹಿನ್ನೆಲೆಯಲ್ಲಿ ದಿಲ್ಲಿ ಹೈಕೋರ್ಟ್ ಆತನ ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿರಿಸಿತು.ಆದಾಗ್ಯೂ ಆತನಿಗೆ ಕಠಿಣ ಶರತ್ತುಗಳನ್ನು ವಿಧಿಸಿದ್ದಲ್ಲದೆ, ಸಂತ್ರಸ್ತೆಯ ನಿವಾಸದಿಂದ ಐದು ಕಿ.ಮೀ. ವ್ಯಾಪ್ತಿಯೊಳಗೆ ಪ್ರವೇಶವನ್ನು ನಿಷೇಧಿಸಿತ್ತು.







