ಸಂಸತ್ ಭವನದ ಭದ್ರತಾ ಉಲ್ಲಂಘನೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು

File Photo: PTI
ಹೊಸದಿಲ್ಲಿ: ಡಿಸೆಂಬರ್ 2023 ರಲ್ಲಿ ನಡೆದ ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ದಿಲ್ಲಿ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ಸುಬ್ರಮೋನಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರ ಪೀಠವು ನೀಲಂ ಆಝಾದ್ ಮತ್ತು ಮಹೇಶ್ ಕುಮಾವತ್ ಅವರಿಗೆ ತಲಾ 50,000 ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತದ ಇಬ್ಬರು ಶ್ಯೂರಿಟಿಗಳ ಮೇಲೆ ಜಾಮೀನು ನೀಡಿದೆ.
ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಸಂದರ್ಶನ ನೀಡಬಾರದು ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್ಗಳನ್ನು ಮಾಡಬಾರದು ಎಂದೂ ಇದೇ ವೇಳೆ ನ್ಯಾಯಾಧೀಶರು ಸೂಚಿಸಿದ್ದಾರೆ.
ಆರೋಪಿಗಳು ತಮ್ಮ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ, ಆರೋಪಿಗಳಾದ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ, ಕಲಾಪದ ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಕೊಠಡಿಗೆ ಹಾರಿ, ಹಳದಿ ಅನಿಲವನ್ನು ಸ್ಪ್ರೇ ಮಾಡಿ ಘೋಷಣೆಗಳನ್ನು ಕೂಗಿದ್ದರು.
ಅದೇ ಸಮಯದಲ್ಲಿ, ಇನ್ನಿಬ್ಬರು ಆರೋಪಿಗಳಾದ ಅಮೋಲ್ ಶಿಂಧೆ ಮತ್ತು ಆಝಾದ್, ಸಂಸತ್ತಿನ ಆವರಣದ ಹೊರಗೆ "ತನಶಾಹಿ ನಹಿ ಚಲೇಗಿ (ಸರ್ವಾಧಿಕಾರ ಕೆಲಸ ಮಾಡುವುದಿಲ್ಲ)" ಎಂದು ಕೂಗುತ್ತಾ ಹಳದಿ-ನೀಲಿ ಬಣ್ಣದ ಸ್ಪ್ರೇ ಸಿಂಪಡಿಸಿದ್ದರು.







