ಸಂಸತ್ ಭದ್ರತಾ ಲೋಪ ಪ್ರಕರಣ: ನಮ್ಮ ಮಗ ರಾಕ್ಷಸನಲ್ಲ, ಜನರಿಗೆ ನೆರವಾಗುವುದನ್ನು ಇಷ್ಟ ಪಡುತ್ತಾನೆ: ಪ್ರಮುಖ ಆರೋಪಿ ಲಲಿತ್ ಝಾ ಹೆತ್ತವರು

ಲಲಿತ್ ಝಾ
ದರ್ಭಂಗಾ (ಬಿಹಾರ): ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿದ ಸಂಸತ್ ಭದ್ರತಾ ಲೋಪದ ಘಟನೆ ನಡೆದು ದಿನಗಳು ಉರುಳಿದ್ದರೂ, ಸಂಚಿನ ರೂವಾರಿ ಲಲಿತ್ ಝಾನ ಹೆತ್ತವರು ಈಗಲೂ ಅದನ್ನು ನಂಬುವ ಸ್ಥಿತಿಯಲ್ಲಿಲ್ಲ.
ಲಲಿತ್ ತಂದೆ ದೇವಾನಂದ ಜೀವನ ನಿರ್ವಹಣೆಗಾಗಿ ಕೋಲ್ಕತಾದಲ್ಲಿ ಅರ್ಚಕ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಸಂಸತ್ ಘಟನೆ ನಡೆದ ಬಳಿಕ ಬಿಹಾರದ ದರ್ಭಂಗಾ ಜಿಲ್ಲೆಯ ರಾಮಪುರ ಉದಯ ಗ್ರಾಮದಲ್ಲಿರುವ, ಶಿಥಿಲಗೊಂಡಿರುವ ತನ್ನ ಪೂರ್ವಜರ ಮನೆಯು ಎಲ್ಲರ ಗಮನವನ್ನು ಸೆಳೆಯುತ್ತಿರುವುದನ್ನು ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.
‘ನನ್ನ ಮಗನ ಬಂಧನದ ಸುದ್ದಿ ಇತರರ ಮೂಲಕ ನನಗೆ ತಿಳಿಯಿತು. ನೀವೇ ನೋಡುತ್ತಿರುವಂತೆ ನಮ್ಮ ಮನೆಯಲ್ಲಿ ಟಿವಿ ಸೆಟ್ ಕೂಡ ಇಲ್ಲ’ ಎಂದು ದೇವಾನಂದ ಸ್ವಗ್ರಾಮದಲ್ಲಿ ತನ್ನನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.
ದಿಗ್ಭ್ರಮೆಗೊಂಡಂತಿದ್ದ ಅವರ ಪತ್ನಿ ಮಂಜುಳಾ,‘ನನ್ನ ಮಗ ರಾಕ್ಷಸನಲ್ಲ. ಅವನು ತಪ್ಪುಗಳನ್ನು ಮಾಡಲು ಸಾಧ್ಯವಿಲ್ಲ. ಆತ ಯಾವಾಗಲೂ ಜನರಿಗೆ ನೆರವಾಗುವುದನ್ನು ಇಷ್ಟಪಡುತ್ತಿದ್ದ. ಆತ ಮೂರು ಸಲ ರಕ್ತದಾನವನ್ನು ಮಾಡಿದ್ದಾನೆ ’ ಎಂದು ಗದ್ಗದಿತರಾಗಿ ಹೇಳಿದರು.
ಗುರುವಾರ ದಿಲ್ಲಿ ಪೋಲಿಸರಿಗೆ ಶರಣಾಗಿರುವ ಲಲಿತ್ (32)ನನ್ನು ಹೆತ್ತವರು ಕೊನೆಯ ಬಾರಿ ನೋಡಿದ್ದು ಒಂದು ವಾರದ ಹಿಂದೆ. ಡಿ.10ರಂದು ಹೆತ್ತವರು ದರ್ಭಂಗಾಕ್ಕೆ ತೆರಳಲು ರೈಲು ಹತ್ತಿದಾಗ ಲಲಿತ್ ಕೋಲ್ಕತಾದಲ್ಲಿಯೇ ಉಳಿದುಕೊಂಡಿದ್ದ. ಆತ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಜೊತೆ ನಿಕಟ ನಂಟು ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಇದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಬಲವಾಗಿ ನಿರಾಕರಿಸಿದೆ.
‘ನನ್ನ ಮಗ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಟ್ಯೂಷನ್ ನೀಡುವ ಮೂಲಕ ಆತ ನನಗೆ ಆರ್ಥಿಕವಾಗಿ ನೆರವಾಗತೊಡಗಿದ್ದ. ನಾವು ಛತ್ ಸಮಯದಲ್ಲಿ ಒಟ್ಟಿಗೇ ದರ್ಭಾಂಗಾಕ್ಕೆ ಬರಬೇಕಿತ್ತು. ಪ್ರತಿ ವರ್ಷ ನಾವು ಹಾಗೆಯೇ ಮಾಡುತ್ತಿದ್ದೆವು. ಆದರೆ ಈ ಸಲ ವಿಪರೀತ ಜನದಟ್ಟಣೆಯಿಂದಾಗಿ ಟಿಕೆಟ್ ಗಳನ್ನು ಪಡೆದುಕೊಳ್ಳಲು ನಮಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ನಾವು ನಮ್ಮ ವಾರ್ಷಿಕ ಭೇಟಿಯನ್ನು ಮುಂದೂಡುವಂತಾಗಿತ್ತು ’ಎಂದು ಹೇಳಿದ ದೇವಾನಂದ,‘ಲಲಿತ್ ನಮ್ಮನ್ನು ಬೀಳ್ಕೊಡಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ. ಯಾವುದೋ ಕಾರ್ಯನಿಮಿತ್ತ ದಿಲ್ಲಿಗೆ ಹೋಗುತ್ತಿರುವುದಾಗಿ ತಿಳಿಸಿದ್ದ ಆತ ನಂತರ ನಮ್ಮನ್ನು ಸೇರಿಕೊಳ್ಳುವುದಾಗಿ ಭರವಸೆ ನೀಡಿದ್ದ. ಲಲಿತ್ ಸಾಮಾಜಿಕ ಹೋರಾಟಗಳನ್ನು ಬೆಂಬಲಿಸುವುದನ್ನು ಇಷ್ಟ ಪಡುತ್ತಿದ್ದ ಮತ್ತು ಎನ್ಜಿಒಗಳೊಂದಿಗೆ ಗುರುತಿಸಿಕೊಂಡಿದ್ದ, ಆದರೆ ಆತ ಎಂದೂ ರಾಜಕೀಯಕ್ಕೆ ಇಳಿದಿರಲಿಲ್ಲ’ ಎಂದರು.
ಲಲಿತ್ ವಿರುದ್ಧ ಕಠಿಣ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಮತ್ತು ಆತನಿಗೆ ಜಾಮೀನೂ ಸಿಗುವುದಿಲ್ಲ ಎನ್ನುವುದನ್ನು ಸುದ್ದಿಗಾರರು ನೆನಪಿಸಿದಾಗ ಗೋಳಾಡತೊಡಗಿದ ದಂಪತಿ,‘ನಮ್ಮ ಮಗನಿಗೆ ಕರುಣೆ ತೋರಿಸುವಂತೆ ನಾವು ನ್ಯಾಯಾಲಯವನ್ನು ಬೇಡಿಕೊಳ್ಳುತ್ತೇವೆ. ಏನೋ ಗೊಂದಲವಾಗಿದೆ, ನಮ್ಮ ಮಗ ಯಾವುದೇ ದುಷ್ಕೃತ್ಯದ ಭಾಗವಾಗಿರಲು ಸಾಧ್ಯವಿಲ್ಲ ’ಎಂದು ಬಿಕ್ಕುತ್ತಲೇ ಹೇಳಿದರು. ಈ ವೃದ್ಧ ದಂಪತಿ ಈಗ ಮಗನಿಗಾಗಿ ಕಠಿಣ ಕಾನೂನು ಹೋರಾಟವನ್ನೂ ನಡೆಸಬೇಕಿದೆ.







