ವಿಮಾನ ಯಾನ ಸುರಕ್ಷತಾ ಸಂಸ್ಥೆಗಳಲ್ಲಿ ಸಿಬ್ಬಂದಿಗಳ ಕೊರತೆ: ಸಂಸದೀಯ ಸಮಿತಿ ಕಳವಳ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಕಳೆದ ಗುರುವಾರ ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನ ಅಪಘಾತದ ತನಿಖೆಯಲ್ಲಿ ವೈಮಾನಿಕ ಸಂಸ್ಥೆಗಳು ಭಾಗಿಯಾಗಿರುವ ಹೊತ್ತಿನಲ್ಲೇ, ವಿಮಾನ ಯಾನ ಸುರಕ್ಷತಾ ಪ್ರಾಧಿಕಾರವಾದ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ ಸೇರಿದಂತೆ ಎಲ್ಲ ಅಧಿಕೃತ ವಿಮಾನ ಯಾನ ಸುರಕ್ಷತಾ ಸಂಸ್ಥೆಗಳಲ್ಲಿ ಸಿಬ್ಬಂದಿಗಳ ಸಂಖ್ಯೆ ನಿಗದಿತ ಪ್ರಮಾಣಕ್ಕಿಂತ ಭಾರಿ ಕಡಿಮೆ ಇದೆ ಎಂದು ಇತ್ತೀಚಿನ ಸಂಸದೀಯ ಸಮಿತಿಯ ವರದಿಯೊಂದರಲ್ಲಿ ಬೊಟ್ಟು ಮಾಡಲಾಗಿದ್ದು, ವಿಮಾನ ಯಾನದ ಸುರಕ್ಷತೆ, ರಕ್ಷಣೆ ಹಾಗೂ ಕಾರ್ಯಾಚರಣಾ ಮಾನದಂಡಗಳ ಜಾರಿಯ ಕುರಿತೂ ಕಳವಳ ವ್ಯಕ್ತಪಡಿಸಿದೆ.
ಸದ್ಯ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯದಲ್ಲಿ ಮಂಜೂರಾಗಿರುವ ಹುದ್ದೆಗಳ ಪೈಕಿ ಶೇ. 53ರಷ್ಟು ಹುದ್ದೆಗಳು ಖಾಲಿ ಇದ್ದರೆ, ನಾಗರಿಕ ವಿಮಾನ ಯಾನ ಸುರಕ್ಷತಾ ದಳ ಹಾಗೂ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲೂ ಕ್ರಮವಾಗಿ ಶೇ. 35 ಹಾಗೂ ಶೇ. 17ರಷ್ಟು ಹುದ್ದೆಗಳು ಖಾಲಿ ಇವೆ ಎಂದು ಜೆಡಿಯು ಪಕ್ಷದ ಹಿರಿಯ ಸಂಸದ ಸಂಜಯ್ ಝಾ ನೇತೃತ್ವದ ಸಾರಿಗೆ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಂಸದೀಯ ಸ್ಥಾಯಿ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಮುಖ ವಿಮಾನ ಯಾನ ಪ್ರಾಧಿಕಾರಗಳು ಹಾಗೂ ಕಾರ್ಯಾಚರಣಾ ಸಂಸ್ಥೆಗಳಲ್ಲಿ ದೊಡ್ಡ ಪ್ರಮಾಣದ ಹುದ್ದೆಗಳು ಖಾಲಿ ಇರುವುದರ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ನಾಗರಿಕ ವಿಮಾನ ಯಾನ ಸಚಿವಾಲಯದ ಅನುದಾನ ಬೇಡಿಕೆ ಕುರಿತ ಈ ವರದಿಯು, "ಈ ಸಂಸ್ಥೆಗಳಲ್ಲಿ ದೀರ್ಘಕಾಲದಿಂದ ಅಗತ್ಯಕ್ಕಿಂತ ಕಡಿಮೆ ಸಿಬ್ಬಂದಿಗಳ ನೇಮಕವಾಗಿರುವುದರಿಂದ, ಸುರಕ್ಷತೆ, ಭದ್ರತೆ ಹಾಗೂ ಸೇವಾಪೂರೈಕೆ ಮಾನದಂಡಗಳ ಕಡೆಗಣನೆಯಾಗಲಿದೆ. ನಿರ್ದಿಷ್ಟವಾಗಿ, ವಾಯು ಯಾನ ಗಾತ್ರವು ನಿರಂತರವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲಿ" ಎಂದು ಎಚ್ಚರಿಸಿದೆ.
ಮಾರ್ಚ್ 25, 2025ರಂದು ಸಂಸತ್ತಿನೆದುರು ಮಂಡಿಸಲಾಗಿದ್ದ ವರದಿಯಲ್ಲಿನ ದತ್ತಾಂಶಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, "ವಿಮಾನ ಯಾನ ವಲಯದ ರಕ್ಷಣೆಗೆ ಆದ್ಯತೆ ನೀಡುವಲ್ಲಿನ ಮೋದಿ ಸರಕಾರದ ನಿರ್ಲಕ್ಷ್ಯ ಕಳವಳಕಾರಿಯಾಗಿದೆ" ಎಂದು ಆರೋಪಿಸಿದ್ದಾರೆ.







