ಇಂಡಿಗೊ ವಿಮಾನದಲ್ಲಿ ಪ್ರಯಾಣಿಕನ ಪವರ್ ಬ್ಯಾಂಕ್ ನಲ್ಲಿ ಬೆಂಕಿ; ತಪ್ಪಿದ ಅವಘಡ

ಸಾಂದರ್ಭಿಕ ಚಿತ್ರ (Photo: PTI)
ಹೊಸದಿಲ್ಲಿ: ದಿಲ್ಲಿ ವಿಮಾನ ನಿಲ್ದಾಣದಿಂದ ನಾಗಾಲ್ಯಾಂಡ್ ನ ದಿಮಾಪುರಕ್ಕೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಎಚ್ಚೆತ್ತ ಕ್ಯಾಬಿನ್ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯಲ್ಲಿ ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ. ವಿಮಾನದ ಸಿಬ್ಬಂದಿಗಳು ಹಾಗೂ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
‘ಅಕ್ಟೋಬರ್ 19ರಂದು (ರವಿವಾರ) ದಿಲ್ಲಿಯಿಂದ ನಾಗಾಲ್ಯಾಂಡ್ ನ ದಿಮಾಪುರಕ್ಕೆ ಹಾರಾಟ ನಡೆಸುತ್ತಿದ್ದ ವಿಮಾನದ ಆಸನದ ಹಿಂಬದಿಯಲ್ಲಿ ಪ್ರಯಾಣಿಕರೊಬ್ಬರು ಇಟ್ಟಿದ್ದ ಪವರ್ ಬ್ಯಾಂಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಕ್ಯಾಬಿನ್ ಸಿಬ್ಬಂದಿಗಳು ಕೆಲವೇ ಸೆಕೆಂಡುಗಳಲ್ಲಿ ಬೆಂಕಿಯನ್ನು ನಿಯಂತ್ರಿಸುವ ಮೂಲಕ, ಪರಿಸ್ಥಿತಿಯನ್ನು ಕ್ಷಿಪ್ರವಾಗಿ ಹತೋಟಿಗೆ ತಂದಿದ್ದಾರೆ” ಎಂದು ಇಂಡಿಗೊ ವಿಮಾನ ಯಾನ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.
ಬೆಂಕಿ ಕಾಣಿಸಿಕೊಂಡ ಪರಿಣಾಮ ವಿಮಾನ ಹಾರಾಟದಲ್ಲಿ ತುಸು ವ್ಯತ್ಯಯವುಂಟಾಯಿತು ಎಂದು ಫ್ಲೈಟ್ ಟ್ರ್ಯಾಕಿಂಗ್ ವೆಬ್ ಸೈಟ್ ವರದಿ ಮಾಡಿದೆ.
ಇತ್ತೀಚೆಗೆ ಹ್ಯಾಂಗ್ ಝೌನಿಂದ ಸಿಯೋಲ್ ಗೆ ಹೊರಟಿದ್ದ ಏರ್ ಚೀನಾ ವಿಮಾನದ ಓವರ್ ಹೆಡ್ ಕಂಪಾರ್ಟ್ ಮೆಂಟ್ ನಲ್ಲಿ ಇರಿಸಲಾಗಿದ್ದ ಲಿಥಿಯಂ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು, ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.





