ಪತಂಜಲಿಗೆ ಮತ್ತೊಮ್ಮೆ ಮುಜುಗರ | ಮಾರುಕಟ್ಟೆಯಿಂದ ಮೆಣಸಿನಪುಡಿ ಹಿಂಪಡೆಯಲು FSSAI ಸೂಚನೆ
ಉತ್ಪನ್ನವನ್ನು ಮರಳಿಸುವಂತೆ ಗ್ರಾಹಕರಿಗೆ ಮನವಿ, ಮರುಪಾವತಿ ಮಾಡುವ ಭರವಸೆ

PC : PTI
ಹೊಸದಿಲ್ಲಿ: ಸ್ವದೇಶಿ ಉತ್ಪನ್ನಗಳ ಹೆಸರಿನಲ್ಲಿ ದೇಶದ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದ ಪತಂಜಲಿ ಫುಡ್ಸ್ ಲಿಮಿಟೆಡ್, ಮತ್ತೊಮ್ಮೆ ಮುಜುಗರಕ್ಕೊಳಗಾಗಿದ್ದು, ಆಹಾರ ನಿಯಂತ್ರಣ ಪ್ರಾಧಿಕಾರವಾದ ಎಫ್ಎಸ್ಎಸ್ಎಐ ಸೂಚನೆಯ ಮೇರೆಗೆ 4 ಟನ್ ಕೆಂಪು ಮೆಣಸಿನ ಕಾಯಿ ಪುಡಿಯನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮುಂದಾಗಿದೆ.
ಭಾರತೀಯ ಆಹಾರ ಪ್ರಮಾಣೀಕರಣ ಹಾಗೂ ಸುರಕ್ಷತಾ ಪ್ರಾಧಿಕಾರವು ಆಹಾರ ಸುರಕ್ಷತಾ ಮಾನದಂಡಗಳ ಪಾಲನೆಯಲ್ಲಿ ವಿಫಲಗೊಂಡಿರುವುದರಿಂದ, ನಿರ್ದಿಷ್ಟ ಬ್ಯಾಚ್ ನ ಪ್ಯಾಕ್ ಮಾಡಿದ ಮೆಣಸಿನ ಕಾಯಿ ಪುಡಿಯನ್ನು ಮಾರುಕಟ್ಟೆಯಿಂದ ಹಿಂಪಡೆಯಬೇಕು ಎಂದು ಪತಂಜಲಿ ಫುಡ್ಸ್ ಗೆ ನಿರ್ದೇಶನ ನೀಡಿದೆ.
“ಪತಂಜಲಿ ಫುಡ್ಸ್ 200 ಗ್ರಾಮ್ ಪೊಟ್ಟಣದ 4 ಟನ್ ನಷ್ಟು ಸಣ್ಣ ಬ್ಯಾಚ್ ನ ಕೆಂಪು ಮೆಣಸಿನ ಕಾಯಿ ಪುಡಿಯನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ” ಎಂದು ಪತಂಜಲಿ ಫುಡ್ಸ್ ಲಿಮಿಟೆಡ್ ಕಂಪನಿಯ ಸಿಇಒ ಸಂಜೀವ್ ಅಸ್ಥಾನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಉತ್ಪನ್ನಗಳ ಮಾದರಿಗಳನ್ನು ಪರೀಕ್ಷಿಸಿದಾಗ, ಅವುಗಳಲ್ಲಿ ಅನುಮತಿ ನೀಡಲಾಗಿರುವ ಕೀಟನಾಶಕಗಳ ಉಳಿಕೆ ಪ್ರಮಾಣಕ್ಕಿಂತ ಹೆಚ್ಚಿರುವುದು ಕಂಡು ಬಂದಿದೆ. ಕೆಂಪು ಮೆಣಸಿನ ಕಾಯಿ ಪುಡಿ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳಿಗೆ ಭಾರತೀಯ ಆಹಾರ ಪ್ರಮಾಣೀಕರಣ ಹಾಗೂ ಸುರಕ್ಷತಾ ಪ್ರಾಧಿಕಾರವು ಗರಿಷ್ಠ ಪ್ರಮಾಣದ ಕೀಟನಾಶಕ ಉಳಿಕೆ ಪ್ರಮಾಣವನ್ನು ನಿಗದಿಗೊಳಿಸಿದೆ” ಎಂದು ಅವರು ಹೇಳಿದ್ದಾರೆ.
ಗ್ರಾಹಕರು ಈ ಉತ್ಪನ್ನಗಳನ್ನು ಮರಳಿಸಬೇಕು ಹಾಗೂ ಹೀಗೆ ಮರಳಿಸಲಾದ ಉತ್ಪನ್ನಗಳಿಗೆ ಸಂಪೂರ್ಣವಾಗಿ ಮರುಪಾವತಿ ಮಾಡಲಾಗುವುದು ಎಂದು ಅವರು ಮನವಿ ಮಾಡಿದ್ದಾರೆ.
“ಮಾರುಕಟ್ಟೆಯಿಂದ ಹಿಂಪಡೆಯಲಾಗುತ್ತಿರುವ ಉತ್ಪನ್ನದ ಮೊತ್ತವು ತೀರಾ ಅತ್ಯಲ್ಪ” ಎಂದೂ ಅಸ್ಥಾನಾ ಹೇಳಿದ್ದಾರೆ.
ಪತಂಜಲಿ ಕಂಪನಿಯು ಖಾದ್ಯ ತೈಲುಗಳು, ಸಿದ್ಧ ಆಹಾರ ಉತ್ಪನ್ನಗಳು ಹಾಗೂ ಪವನ ಯಂತ್ರ ವಲಯಗಳಲ್ಲಿ ಅಸ್ತಿತ್ವದಲ್ಲಿದೆ. ಈ ಕಂಪನಿಯು ಪತಂಜಲಿ, ರುಚಿ ಗೋಲ್ಡ್, ನ್ಯೂಟ್ರೆಲಾ ಇತ್ಯಾದಿ ಬ್ರ್ಯಾಂಡ್ ಹೆಸರುಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.







