ದಿಲ್ಲಿಯ ಎರಡು ಕ್ಷೇತ್ರಗಳ ಮತದಾರ ಪಟ್ಟಿಯಲ್ಲಿ ಪವನ್ ಖೇರಾ ಹೆಸರು: ಚುನಾವಣಾ ಆಯೋಗದಿಂದ ನೋಟಿಸ್

ಪವನ್ ಖೇರಾ PC: ANI
ಹೊಸದಿಲ್ಲಿ: ದಿಲ್ಲಿಯ ಎರಡು ವಿಧಾನ ಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಹೆಸರು ನೋಂದಾಯಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ ಬಳಿಕ ಚುನಾವಣಾ ಆಯೋಗ ಪವನ್ ಖೇರಾ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಬಿಜೆಪಿಯ ಪ್ರಕಾರ, ಖೇರಾ ಅವರ ಹೆಸರು ಜಂಗ್ಪುರ ಹಾಗೂ ಹೊಸದಿಲ್ಲಿ ವಿಧಾನ ಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಕಂಡು ಬಂದಿದೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಅಥವಾ ಒಂದೇ ಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಹೆಸರು ನೋಂದಾಯಿಸಿಕೊಳ್ಳುವುದನ್ನು ನಿರ್ಬಂಧಿಸುವ ಪ್ರಜಾಪ್ರತಿನಿಧಿ ಕಾಯ್ದೆ-1950ರ ಸೆಕ್ಷನ್ 17 ಹಾಗೂ 18ರ ಅಡಿಯಲ್ಲಿ ಪವನ್ ಖೇರಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪೂರಕ ದಾಖಲೆಗಳೊಂದಿಗೆ ವಿವರಣೆಯನ್ನು ಸೆಪ್ಟಂಬರ್ 8ರಂದು ಬೆಳಗ್ಗೆ 11 ಗಂಟೆಯ ಒಳಗೆ ಸಲ್ಲಿಸುವಂತೆ ಅವರಿಗೆ ನಿರ್ದೇಶಿಸಲಾಗಿದೆ.
ಚುನಾವಣಾ ಆಯೋಗದ ನೋಟಿಸ್ ನಲ್ಲಿ, ‘‘ನಿಮಗೆ ತಿಳಿದಿರುವಂತೆ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಪ್ರಜಾಪ್ರತಿನಿಧಿ ಕಾಯ್ದೆ-1950ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ’’ ಎಂದು ಹೇಳಲಾಗಿದೆ.
ಈ ಮೇಲೆ ಹೇಳಿದ ಕಾಯ್ದೆಯ ಅಡಿಯಲ್ಲಿ ನಿಮ್ಮ ವಿರುದ್ಧ ಯಾಕೆ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂಬುದಕ್ಕೆ ಕಾರಣಗಳನ್ನು ತಿಳಿಸುವಂತೆ ನಿಮಗೆ ನಿರ್ದೇಶಿಸಲಾಗಿದೆ. ಚುನಾವಣಾ ನಿಯಮದ ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಸಕ್ರಿಯ ಮತದಾರರ ಗುರುತು ಚೀಟಿಗಳನ್ನು ಹೊಂದುವುದು ಒಂದು ವರ್ಷದ ವರೆಗೆ ಕಾರಾಗೃಹ ಶಿಕ್ಷೆ, ದಂಡ ಅಥವಾ ಎರಡಕ್ಕೂ ಅರ್ಹವಾಗಿದೆ.
ಖೇರಾ ಅವರು ಒಂದು ಬಾರಿ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಿದ ಅಥವಾ ಗಡುವಿನ ಒಳಗೆ ಪ್ರತಿಕ್ರಿಯೆ ಸಲ್ಲಿಸಲು ಅವರು ವಿಫಲವಾದರೆ, ಆ ಬಳಿಕ ಚುನಾವಣಾ ಆಯೋಗ ಕಾನೂನಿಗೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಲಿದೆ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.







