ಸೆ.30ರ ಗಡುವಿಗೆ ಮುನ್ನ ಏಕೀಕೃತ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ: ಸರಕಾರಿ ನೌಕರರಿಗೆ ವಿತ್ತಸಚಿವಾಲಯದ ಸೂಚನೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)ಯನ್ನು ಆಯ್ಕೆ ಮಾಡಿಕೊಳ್ಳಲು ಬಯಸುವ ಸರಕಾರಿ ನೌಕರರು ಸೆ.30ರ ಗಡುವಿನೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕೇಂದ್ರ ವಿತ್ತ ಸಚಿವಾಲಯವು ಸೂಚಿಸಿದೆ.
ಕೇಂದ್ರ ಸರಕಾರವು ತನ್ನ ನೌಕರರಿಗೆ ಎ.1,2025ರಿಂದ ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್ಪಿಎಸ್)ಯಡಿ ಯುಪಿಎಸ್ ಆಯ್ಕೆಯನ್ನು ನೀಡಿದೆ.
ಎನ್ಪಿಎಸ್ ಅಡಿಯ ಅರ್ಹ ಉದ್ಯೋಗಿಗಳು ಮತ್ತು ನಿವೃತ್ತರು ಯುಪಿಎಸ್ ಆಯ್ಕೆ ಮಾಡಿಕೊಳ್ಳಲು ಸೆ.30 ಕೊನೆಯ ದಿನಾಂಕವಾಗಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಕೊನೇ ಘಳಿಗೆಯಲ್ಲಿನ ತೊಂದರೆಗಳಿಂದ ಪಾರಾಗಲು ಎಲ್ಲ ಅರ್ಹ ಉದ್ಯೋಗಿಗಳು ಸಕಾಲದಲ್ಲಿ ತಮ್ಮ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿರುವ ಸಚಿವಾಲಯವು,ಸೆ.30ರ ನಂತರ ಯುಪಿಎಸ್ಗೆ ಬದಲಾಗಲು ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.
ಜು.20ರವರೆಗೆ 31,555 ಕೇಂದ್ರ ಸರಕಾರಿ ನೌಕರರು ಯುಪಿಎಸ್ ಆಯ್ಕೆ ಮಾಡಿಕೊಂಡಿದ್ದಾರೆ.
ಆ.25ರಂದು ಯುಪಿಎಸ್ನ್ನು ಜಾರಿಗೊಳಿಸಿದ್ದ ವಿತ್ತ ಸಚಿವಾಲಯವು,ಅದನ್ನು ಆಯ್ಕೆ ಮಾಡಿಕೊಂಡವರು ಎನ್ಪಿಎಸ್ಗೆ ಬದಲಾಗಲು ಒಂದು ಬಾರಿಯ ಅವಕಾಶವನ್ನು ಮುಂದಿಟ್ಟಿತ್ತು.
ಯುಪಿಎಸ್ ಆಯ್ಕೆ ಮಾಡಿಕೊಂಡವರು ನಿವೃತ್ತಿಗೆ ಒಂದು ವರ್ಷ ಮೊದಲು ಅಥವಾ ಸ್ವಯಂ ನಿವೃತ್ತಿ ಪಡೆಯುವುದಿದ್ದರೆ ಅಂತಹ ನಿವೃತ್ತಿಗೆ ಮೂರು ತಿಂಗಳು ಮೊದಲು ಎನ್ಪಿಎಸ್ಗೆ ಬದಲಿಸಿಕೊಳ್ಳಬಹುದು ಎಂದು ಅದು ಸ್ಪಷ್ಟಪಡಿಸಿತ್ತು.
ಸರಕಾರವು ಯುಪಿಎಸ್ ಅಡಿ ‘ನಿವೃತ್ತಿ ಗ್ರಾಚ್ಯುಯಿಟಿ ಮತ್ತು ಮರಣ ಗ್ರಾಚ್ಯುಟಿ’ ಸೌಲಭ್ಯವನ್ನು ವಿಸ್ತರಿಸಿದೆ. ಆದಾಯ ತೆರಿಗೆ ಕಾಯ್ದೆ,1961ರಡಿ ಎನ್ಪಿಎಸ್ಗೆ ಲಭ್ಯವಿರುವ ತೆರಿಗೆ ಲಾಭಗಳನ್ನು ಯುಪಿಎಸ್ಗೂ ವಿಸ್ತರಿಸಲಾಗಿದೆ.
ಅಲ್ಲದೆ ಎನ್ಪಿಎಸ್ ಅಡಿ ಯುಪಿಎಸ್ ಆಯ್ಕೆ ಮಾಡಿಕೊಳ್ಳುವ ಸರಕಾರಿ ನೌಕರರು ಸೇವಾವಧಿಯಲ್ಲಿ ನಿಧನರಾದರೆ ಅಥವಾ ಅಂಗವೈಕಲ್ಯತೆಯ ಕಾರಣದಿಂದ ಸೇವೆಯಿಂದ ಬಿಡುಗಡೆಗೊಂಡರೆ ನಿಯಮಾನುಸಾರ ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.







