ತೆಲಂಗಾಣದ ಜನರಿಗೆ 10 ವರ್ಷಗಳ ದುರಾಡಳಿತದಿಂದ ಸ್ವಾತಂತ್ರ್ಯ ಸಿಕ್ಕಿದೆ: ರಾಜ್ಯಪಾಲೆ ತಮಿಳಿಸೈ ಸೌಂದರ್ಯರಾಜನ್
ರಾಜ್ಯಪಾಲೆ ತಮಿಳಿಸೈ ಸೌಂದರ್ಯರಾಜನ್ (PTi)
ಹೈದರಾಬಾದ್: ವಿಧಾನಸಭೆ ಚುನಾವಣೆಯಲ್ಲಿ 10 ವರ್ಷಗಳ ದುರಾಡಳಿತದಿಂದ ಮತದಾರರಿಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ರಾಜ್ಯಪಾಲೆ ತಮಿಳಿಸೈ ಸೌಂದರ್ಯರಾಜನ್ ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ನೂತನ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದ ಮೊದಲ ದಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ತೆಲಂಗಾಣದ ಅಭಿವೃದ್ದಿಗೆ ಹೊಸ ಪ್ರಾರಂಭ ನೀಡಿದ 2023ನೇ ಇಸವಿಯು ಇತಿಹಾಸದಲ್ಲಿ ಉಳಿಯಲಿದೆ. ಜನ ಈಗಾಗಲೇ ಬದಲಾವಣೆಯನ್ನು ಅನುಭವಿಸುತ್ತಿದ್ದಾರೆ. ಅವರು ತಮ್ಮನ್ನು ತಾವು ಸ್ವಾತಂತ್ರ್ಯಗೊಳಿಸಿಕೊಂಡಿದ್ದಾರೆ. ತೆಲಂಗಾಣದಲ್ಲಿ ಈಗ ತಾಜಾ ಗಾಳಿ ಬೀಸುತ್ತಿದೆ’ ಎಂದು ಹೇಳಿದ್ದಾರೆ.
‘ಆಯ್ಕೆಯಾಗಿರುವ ಸರ್ಕಾರವು ಜನರಿಗೆ, ಪಕ್ಷಗಳಿಗೆ, 2014ರಲ್ಲಿ ಪ್ರತ್ಯೇಕ ತೆಲಂಗಾಣ ರಚಿಸಿದ್ದಕ್ಕಾಗಿ ಆಗಿನ ಯುಪಿಎ ಸರ್ಕಾರಕ್ಕೆ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಧನ್ಯವಾದ ಸಲ್ಲಿಸುತ್ತದೆ’ ಎಂದು ಹೇಳಿದ್ದಾರೆ.
ʼನಾಲ್ಕು ಕೋಟಿ ತೆಲಂಗಾಣ ಜನರ ಪರವಾಗಿ, ತೆಲಂಗಾಣ ರಾಜ್ಯ ರಚಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಸರ್ಕಾರ ಧನ್ಯವಾದ ಅರ್ಪಿಸುತ್ತದೆ’ ಎಂದು ಅವರು ಹೇಳಿದ್ದಾರೆ.
ತೆಲಂಗಾಣ ರಾಜ್ಯ ರಚನೆ ಹೋರಾಟದಲ್ಲಿ ಮಡಿದವರಿಗೆ ರಾಜ್ಯಪಾಲರು ಶ್ರದ್ಧಾಂಜಲಿ ಅರ್ಪಿಸಿದರು.