ಹೆಣ್ಣು ಹೆತ್ತ ಕಾರಣಕ್ಕೆ ಸೊಸೆಯಂದಿರಿಗೆ ಕಿರುಕುಳ ನೀಡುವ ಜನರಲ್ಲಿ ಅರಿವು ಮೂಡಿಸಬೇಕು : ದಿಲ್ಲಿ ಹೈಕೋರ್ಟ್
“ಪುರುಷನ ವೈ ವರ್ಣತಂತು ಗರ್ಭದಲ್ಲಿ ಮಗುವಿನ ಲಿಂಗ ನಿರ್ಧರಿಸುತ್ತದೆ”

ದಿಲ್ಲಿ ಉಚ್ಛ ನ್ಯಾಯಾಲಯ
ಹೊಸದಿಲ್ಲಿ: ಪುರುಷನಲ್ಲಿರುವ ವೈ ವರ್ಣತಂತು ಮಗುವಿನ ಲಿಂಗವನ್ನು ನಿರ್ಧರಿಸುತ್ತದೆ ಎಂಬುದನ್ನು, ಹೆಣ್ಣು ಮಗುವಿಗೆ ಜನ್ಮ ನೀಡಿರುವುದಕ್ಕೆ ಸೊಸೆಯಂದಿರಿಗೆ ಕಿರುಕುಳ ನೀಡುವ ಜನರಿಗೆ ತಿಳಿವಳಿಕೆ ನೀಡಬೇಕು ಎಂದು ದಿಲ್ಲಿ ಉಚ್ಛ ನ್ಯಾಯಾಲಯ ಹೇಳಿದೆ.
ವರದಕ್ಷಿಣೆ ಸಾವು ಪ್ರಕರಣದಲ್ಲಿ ಆರೋಪಿಗೆ ಜಾಮೀನು ನಿರಾಕರಿಸಿದ ಸಂದರ್ಭ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಹೆಣ್ಣು ಮಗುವಿಗೆ ಜನ್ಮ ನೀಡಿರುವುದಕ್ಕೆ ಮಹಿಳೆಯನ್ನು ಹತ್ಯೆಗೈಯುತ್ತಿರುವ ಘಟನೆಗಳು ಸಮಾನತೆಯ ಸಮಾಜ ನಿರ್ಮಾಣದ ಪಥದಲ್ಲಿನ ಅಡ್ಡಿಗಳು ಎಂದು ನ್ಯಾಯಾಲಯ ತಿಳಿಸಿದೆ.
ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರ ಪೀಠ, ಹೆಣ್ಣು ಮಗುವಿಗೆ ಜನ್ಮ ನೀಡುವ ಹಾಗೂ ವಂಶ ವೃಕ್ಷವನ್ನು ಬೆಳೆಸುವ ಆಕಾಂಕ್ಷೆಯನ್ನು ಈಡೇರಿಸದ ಮಹಿಳೆಯರಿಗೆ ಕಿರುಕುಳ, ಅವರ ಆತ್ಮಹತ್ಯೆ ಹಾಗೂ ವರದಕ್ಷಿಣೆ ಸಾವು ಪ್ರಕರಣವನ್ನು ಉಲ್ಲೇಖಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿತು. ಮಗು ಹೆಣ್ಣು ಅಥವಾ ಗಂಡು ಎಂಬುದನ್ನು ನಿರ್ಧರಿಸುವುದು ತಮ್ಮ ಪುತ್ರನ ವರ್ಣತಂತು. ಸೊಸೆಯ ವರ್ಣತಂತು ಅಲ್ಲ ಎಂಬ ಬಗ್ಗೆ ಇಂತಹ ಜನರಿಗೆ ತಿಳಿವಳಿಕೆ ನೀಡಬೇಕು ಎಂದು ಅವರು ಹೇಳಿದರು.
ಭಾರತೀಯ ದಂಡ ಸಂಹಿತೆ ಸೆಕ್ಷನ್ಗಳಾದ 304 ಬಿ (ವರದಕ್ಷಿಣೆ ಸಾವು) ಹಾಗೂ 498ಎ (ಪತಿ ಅಥವಾ ಮಾವ, ಅತ್ತೆಯಿಂದ ಮಹಿಳೆ ಮೇಲೆ ಕ್ರೌರ್ಯ) ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿ ದಿಲ್ಲಿ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವರದಕ್ಷಿಣೆ ಬೇಡಿಕೆ, ಪತಿ ಹಾಗೂ ಅತ್ತೆ, ಮಾವನ ಒತ್ತಡದಿಂದ ತನ್ನ ಪುತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಯ ಮಾವ ಪ್ರಕರಣ ದಾಖಲಿಸಿದ್ದರು. ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವುದಕ್ಕೆ ತನ್ನ ಪುತ್ರಿಗೆ ಹಿಂಸೆ ನೀಡಲಾಗಿದೆ ಹಾಗೂ ಆಕೆಯ ಮಾವ ಅಪಹಾಸ್ಯ ಕೂಡ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.







