ಹೈಕೋರ್ಟ್ ನ್ಯಾಯಾಧೀಶರ ಕಾರ್ಯಕ್ಷಮತೆಯ ಮೌಲ್ಯಮಾಪನದ ಅಗತ್ಯವಿದೆ : ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ : PTI
ಹೊಸದಿಲ್ಲಿ,ಸೆ.23: ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ಕಾರ್ಯಕ್ಷಮತೆಯ ಮೌಲ್ಯಮಾಪನದ ಅಗತ್ಯವಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿದೆ. ವಿಶೇಷವಾಗಿ ತಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸದ ಹೈಕೋರ್ಟ್ ನ್ಯಾಯಾಧೀಶರಿಗೆ ಸಂಬಂಧಿಸಿದಂತೆ ಶಾಲಾ ಮುಖ್ಯೋಪಾಧ್ಯಾಯರಂತೆ ವರ್ತಿಸುವ ಆಸಕ್ತಿ ತನಗಿಲ್ಲ ಎಂದು ಅದು ಒತ್ತಿ ಹೇಳಿದೆ.
ತಮ್ಮ ಕಾರ್ಯಗಳನ್ನು ನಿರ್ವಹಿಸಲು ಅಸಮರ್ಥರಾಗಿರುವ ಕೆಲವು ಹೈಕೋರ್ಟ್ ನ್ಯಾಯಾಧೀಶರನ್ನು ಟೀಕಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಎನ್.ಕೋಟೀಶ್ವರ ಸಿಂಗ್ ಅವರ ಪೀಠವು,‘ಕಾರಣಗಳೇನೇ ಇರಲಿ, ಅದು ಒಳ್ಳೆಯದ್ದಾಗಿರಲಿ ಅಥವಾ ಕೆಟ್ಟದ್ದಾಗಿರಲಿ, ನಮಗೆ ತಿಳಿದಿಲ್ಲ ಮತ್ತು ಕೆಲವು ಸಂದರ್ಭಗಳಿರಬಹುದು’ ಎಂದು ಹೇಳಿತು.
ಹೈಕೋರ್ಟ್ ನ್ಯಾಯಾಧೀಶರ ಕಾರ್ಯಕ್ಷಮತೆಯ ಮೌಲ್ಯಮಾಪನಕ್ಕೆ ಕರೆ ನೀಡುವುದು ಅಗತ್ಯವಿದೆ ಎಂದು ನ್ಯಾಯಾಲಯವು ತಿಳಿಸಿತು.
ಸರ್ವೋಚ್ಚ ನ್ಯಾಯಾಲಯವು ಕೆಲವು ಕ್ರಿಮಿನಲ್ ಮೇಲ್ಮನವಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಜಾರ್ಖಂಡ್ ಉಚ್ಚ ನ್ಯಾಯಾಲಯವು ತಮ್ಮ ಕ್ರಿಮಿನಲ್ ಮೇಲ್ಮನವಿಗಳಲ್ಲಿ ವರ್ಷಗಳ ಕಾಲ ತನ್ನ ತೀರ್ಪುಗಳನ್ನು ಕಾಯ್ದಿರಿಸಿದ್ದರೂ ಅವುಗಳನ್ನು ಪ್ರಕಟಿಸಿಲ್ಲ. ನಂತರ ಅದು ತೀರ್ಪುಗಳನ್ನು ಪ್ರಕಟಿಸಿದ್ದು, ಅನೇಕ ಅಪರಾಧಿಗಳು ಖುಲಾಸೆಗೊಂಡಿದ್ದಾರೆ ಎಂದು ಜೀವಾವಧಿ ಶಿಕ್ಷೆ ಮತ್ತು ಮರಣ ದಂಡನೆಗೆ ಗುರಿಯಾಗಿರುವ ಕೆಲವು ಅಪರಾಧಿಗಳು ಈ ಅರ್ಜಿಗಳಲ್ಲಿ ಹೇಳಿಕೊಂಡಿದ್ದಾರೆ.
ಹೈಕೋರ್ಟ್ ನ್ಯಾಯಾಧೀಶರನ್ನು ನಿಯಂತ್ರಿಸಲು ತಾನು ಶಾಲಾ ಮುಖ್ಯೋಪಾಧ್ಯಾಯರಂತೆ ವರ್ತಿಸಲು ಬಯಸುವುದಿಲ್ಲ, ಆದರೆ ಅವರ ಮೇಜುಗಳ ಮೇಲೆ ಕಡತಗಳು ರಾಶಿಯಾಗದಂತೆ ನೋಡಿಕೊಳ್ಳಲು ಸ್ವಯಂ ನಿರ್ವಹಣಾ ವ್ಯವಸ್ಥೆಯೊಂದು ಇರಬೇಕು. ನ್ಯಾಯಾಧೀಶರು ತಮ್ಮ ಮುಂದಿರುವ ಕೆಲಸಗಳೇನು ಮತ್ತು ತಾವು ಎಷ್ಟು ಕೆಲಸವನ್ನು ನಿರ್ವಹಿಸಬೇಕು ಎನ್ನುವುದನ್ನು ತಿಳಿದುಕೊಳ್ಳಲು ವಿಶಾಲವಾದ ಮಾರ್ಗಸೂಚಿಗಳು ಇರಬೇಕು ಎಂದು ನ್ಯಾಯಾಲಯವು ಹೇಳಿತು.
ಕೆಲವು ನ್ಯಾಯಮೂರ್ತಿಗಳು ದಣಿವರಿಯದೆ ಕೆಲಸ ಮಾಡಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುತ್ತಿದ್ದರೆ ಕೆಲವು ನ್ಯಾಯಮೂರ್ತಿಗಳಿಗೆ ಅದೇ ದಕ್ಷತೆಯಿಂದ ತೀರ್ಪಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ ಪೀಠವು, ಉದಹರಣೆಗೆ ನ್ಯಾಯಾಧೀಶರೋರ್ವರು ಕ್ರಿಮಿನಲ್ ಮೇಲ್ಮನವಿಯ ವಿಚಾರಣೆ ನಡೆಸುತ್ತಿದ್ದಾಗ ಅವರು ದಿನಕ್ಕೆ 50 ಪ್ರಕರಣಗಳನ್ನು ನಿರ್ಧರಿಸಬೇಕು ಎಂದು ನಿರೀಕ್ಷಿಸಲಾಗುವುದಿಲ್ಲ ಮತ್ತು ಅವರು ದಿನವೊಂದರಲ್ಲಿ ಒಂದು ಕ್ರಿಮಿನಲ್ ಮೇಲ್ಮನವಿಯನ್ನು ನಿರ್ಧರಿಸಿದರೆ ಅದೇ ದೊಡ್ಡ ಸಾಧನೆಯಾಗುತ್ತದೆ. ಆದರೆ ಜಾಮೀನು ವಿಷಯದಲ್ಲಿ ನ್ಯಾಯಾಧೀಶರೋರ್ವರು ತಾನು ದಿನಕ್ಕೆ ಒಂದೇ ಅರ್ಜಿಯನ್ನು ನಿರ್ಧರಿಸುತ್ತೇನೆ ಎಂದು ಹೇಳಿದರೆ ಅದು ಆತ್ಮಾವಲೋಕನ ಅಗತ್ಯವಿರುವ ಸಂಗತಿಯಾಗುತ್ತದೆ ಎಂದು ತಿಳಿಸಿತು.
ಸಾರ್ವಜನಿಕರು ನ್ಯಾಯಾಂಗದಿಂದ ಹೆಚ್ಚಿನ ನ್ಯಾಯಸಮ್ಮತ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ ಎಂದು ಪೀಠವು ಒತ್ತಿ ಹೇಳಿತು.
ಪ್ರಕರಣಗಳನ್ನು ಕಾಯ್ದಿರಿಸಲಾದ ಹೈಕೋರ್ಟ್ ಡೇಟಾ, ತೀರ್ಪು ಪ್ರಕಟಣೆಯ ದಿನಾಂಕ ಮತ್ತು ತೀರ್ಪುಗಳನ್ನು ಅಪ್ಲೋಡ್ ಮಾಡಿದ ದಿನಾಂಕಗಳನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ನ್ಯಾಯವಾದಿ ಫೌಝಿಯಾ ಶಕೀಲ್ ಅವರಿಗೆ ನ್ಯಾಯಾಲಯವು ಸೂಚಿಸಿತು. ವಿಷಯದಲ್ಲಿ ನೆರವಾಗುವಂತೆ ಹಿರಿಯ ವಕೀಲ ಅಜಿತ ಸಿನ್ಹಾ ಅವರನ್ನು ಅದು ಕೇಳಿಕೊಂಡಿತು.
ಕೆಲವು ನ್ಯಾಯಾಧೀಶರು ಪ್ರಕರಣಗಳನ್ನು ಅನಗತ್ಯವಾಗಿ ಮುಂದೂಡುವ ಚಾಳಿಯನ್ನು ಹೊಂದಿದ್ದಾರೆ. ಇದು ಅಪೇಕ್ಷಣೀಯವಲ್ಲ. ಅದು ನ್ಯಾಯಾಧೀಶರ ವರ್ಚಸ್ಸಿಗೆ ಹಾನಿಯನ್ನುಂಟು ಮಾಡಬಹುದು ಎಂದೂ ಪೀಠವು ಬೆಟ್ಟು ಮಾಡಿತು.







