ಹಲಾಲ್ ಪ್ರಮಾಣಿಕೃತ ಉತ್ಪನ್ನ ನಿಷೇಧ ಪ್ರಶ್ನಿಸಿ ಅರ್ಜಿ ; ಉತ್ತರಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ: ಹಲಾಲ್ ಪ್ರಮಾಣಿಕೃತ ಉತ್ಪನ್ನಗಳ ಉತ್ಪಾದನೆ, ಮಾರಾಟ, ದಾಸ್ತಾನು ಹಾಗೂ ವಿತರಣೆ ಮೇಲೆ ಉತ್ತರಪ್ರದೇಶ ಸರಕಾರ ವಿಧಿಸಿದ ನಿಷೇದ ಪ್ರಶ್ನಿಸಿದ ಅರ್ಜಿಗಳ ಗುಚ್ಛದ ಕುರಿತಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಉತ್ತರಪ್ರದೇಶ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ ಹಾಗೂ ವಿಸ್ತೃತ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ಯೋಗಿ ಆದಿತ್ಯನಾಥ್ ಸರಕಾರ ರಾಜ್ಯದಲ್ಲಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮಾರಾಟಕ್ಕೆ ನವೆಂಬರ್ ನಲ್ಲಿ ನಿಷೇಧ ವಿಧಿಸಿತ್ತು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಉಲ್ಲೇಖಿಸದೇ ಇರುವುದರಿಂದ ಅಂತಹ ಪ್ರಮಾಣೀಕರಣದೊಂದಿಗೆ ವಸ್ತುಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರ ಎಂದು ಅದು ಪ್ರತಿಪಾದಿಸಿತ್ತು.
ಆಹಾರ ಉತ್ಪನ್ನಗಳ ಹಲಾಲ್ ಪ್ರಮಾಣೀಕರಣ ಆಹಾರ ವಸ್ತುಗಳ ಗುಣಮಟ್ಟಕ್ಕೆ ಸಂಬಂಧಿಸಿ ಗೊಂದಲವನ್ನು ಸೃಷ್ಟಿಸುವ ಪರ್ಯಾಯ ವ್ಯವಸ್ಥೆ. ಇದು ಕಾಯಿದೆಯ ಮೂಲ ಉದ್ದೇಶಕ್ಕೆ ಸಂಪೂರ್ಣ ವಿರುದ್ಧವಾದುದು. ಕಾಯ್ದೆಯ ಸೆಕ್ಷನ್ 89ರ ಅಡಿಯಲ್ಲಿ ಸಮರ್ಥನೀಯವಲ್ಲ ಎಂದು ಅದು ತನ್ನ ಆದೇಶದಲ್ಲಿ ತಿಳಿಸಿತ್ತು.
ಈ ಹಲಾಲ್ ಪ್ರಮಾಣೀಕರಣವನ್ನು ಬಳಸುವುದು ವರ್ಗ ದ್ವೇಷವನ್ನು ಬಿತ್ತಲು, ಸಮಾಜದಲ್ಲಿ ವಿಭಜನೆಯನ್ನು ಸೃಷ್ಟಿಸಲು ಹಾಗೂ ದೇಶವನ್ನು ದುರ್ಬಲಗೊಳಿಸಲು ಎಂದು ಅದು ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ಜಮೈತ್ ಉಲೆಮಾ ಎ ಮಹಾರಾಷ್ಟ್ರ ಹಾಗೂ ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಕೆಲವು ಸಂಸ್ಥೆ, ಸಂಘಟನೆಗಳು ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದವು.