ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ನ್ಯಾಯಾಂಗ ಉಸ್ತುವಾರಿಯಲ್ಲಿ ತನಿಖೆ ಕೋರಿ ಅರ್ಜಿ : ನ.7ರಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ

Photo credit: PTI
ಹೊಸದಿಲ್ಲಿ, ನ. 4: ಅಹ್ಮದಾಬಾದ್ನಲ್ಲಿ ಜೂನ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ತನಿಖೆ ಮಾಡಲು ನ್ಯಾಯಾಂಗದ ಉಸ್ತುವಾರಿಯಲ್ಲಿ ಸಮಿತಿಯೊಂದನ್ನು ರಚಿಸಬೇಕು ಎಂಬುದಾಗಿ ಕೋರಿ ಪುಷ್ಕರಾಜ್ ಸಭರ್ವಾಲ್ ಮತ್ತು ಭಾರತೀಯ ಪೈಲಟ್ಗಳ ಒಕ್ಕೂಟ ಸಲ್ಲಿಸಿರುವ ರಿಟ್ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಾಧೀಶರ ನ್ಯಾಯಪೀಠವು ನವೆಂಬರ್ 7ರಂದು ನಡೆಸಲಿದೆ.
ಪುಷ್ಕರಾಜ್ ಸಭರ್ವಾಲ್ರ ಪುತ್ರ ಹಾಗೂ ನತದೃಷ್ಟ ವಿಮಾನದ ಮುಖ್ಯ ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಇಬ್ಬರು ನ್ಯಾಯಾಧೀಶರ ನ್ಯಾಯಪೀಠವು ಪುಷ್ಕರಾಜ್ ಮತ್ತು ಭಾರತೀಯ ಪೈಲಟ್ಗಳ ಒಕ್ಕೂಟ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ.
ಕೇಂದ್ರ ಸರಕಾರ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮತ್ತು ವಿಮಾನ ಅಪಘಾತ ತನಿಖಾ ಬ್ಯೂರೋ ಮಹಾನಿರ್ದೇಶಕ (ಎಎಐಬಿ)ರನ್ನು ಪ್ರತಿವಾದಿಯಾಗಿಸಿ 267 ಪುಟಗಳ ರಿಟ್ ಅರ್ಜಿಯನ್ನು ಅಕ್ಟೋಬರ್ 10ರಂದು ಸುಪ್ರೀಂ ಕೋರ್ಟ್ನಲ್ಲಿ ಸಲಿಸಲಾಗಿತ್ತು.
ತನಿಖೆಯು ನ್ಯಾಯೋಚಿತ, ಪಾರದರ್ಶಕ ಮತ್ತು ತಾಂತ್ರಿಕವಾಗಿ ಸಮರ್ಥವಾಗಿರುವಂತೆ ನೋಡಿಕೊಳ್ಳುವುದಕ್ಕಾಗಿ ವಾಯುಯಾನ ಕ್ಷೇತ್ರದ ಸ್ವತಂತ್ರ ಪರಿಣತರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಬೇಕು ಮತ್ತು ಸಮಿತಿಯ ನೇತೃತ್ವವನ್ನು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರಿಗೆ ವಹಿಸಬೇಕು ಎಂಬುದಾಗಿ ಅರ್ಜಿಯಲ್ಲಿ ಕೋರಲಾಗಿದೆ.
ಜೂನ್ 12ರಂದು ಬೋಯಿಂಗ್ 787-8 ವಿಮಾನವು ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಸೆಕೆಂಡ್ಗಳಲ್ಲಿ ನಿಲ್ದಾಣದ ಹೊರಭಾಗದಲ್ಲಿರುವ ವೈದ್ಯಕೀಯ ಕಾಲೇಜೊಂದರ ಹಾಸ್ಟೆಲ್ಗೆ ಅಪ್ಪಳಿಸಿತ್ತು. ದುರಂತದಲ್ಲಿ ಒಟ್ಟು 260 ಮಂದಿ ಮೃತಪಟ್ಟಿದ್ದಾರೆ.







