ಸಾಕು ನಾಯಿಯ ವಾರಸುದಾರಿಕೆ ವಿವಾದ | ಒಟ್ಟಿಗೆ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಿ: ಮಹುವಾ ಮೊಯಿತ್ರಾ, ದೇಹಾದ್ರೆಯಿಗೆ ದಿಲ್ಲಿ ಹೈಕೋರ್ಟ್ ಸೂಚನೆ

ಮಹುವಾ ಮೊಯಿತ್ರಾ, ದೇಹಾದ್ರೆ | PTI
ಹೊಸದಿಲ್ಲಿ: ಸಾಕುನಾಯಿ ವಾರಸುದಾರಿಕೆ ಕುರಿತಂತೆ ನಡೆಯುತ್ತಿರುವ ಕಾನೂನು ಹೋರಾಟವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸದಂತೆ ತಮ್ಮನ್ನು ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ವಕೀಲ ಅನಂತ್ ದೇಹಾದ್ರೆಯಿ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾರಿಂದ ಬುಧವಾರ ದಿಲ್ಲಿ ಹೈಕೋರ್ಟ್ ಪ್ರತಿಕ್ರಿಯೆ ಕೋರಿದೆ.
ಮಹುವಾ ಮೊಯಿತ್ರಾಗೆ ನೋಟಿಸ್ ಜಾರಿಗೊಳಿಸಿದ ನ್ಯಾ. ಮನೋಜ್ ಜೈನ್, ನೀವಿಬ್ಬರೂ ಒಂದೆಡೆ ಕುಳಿತು ಈ ವಿಷಯವನ್ನೇಕೆ ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳೊಬಾರದು ಎಂದೂ ಪ್ರಶ್ನಿಸಿದರು.
ಈ ಹಿಂದೆ ಒಟ್ಟಾಗಿ ಜೀವಿಸುತ್ತಿದ್ದ ಮಹುವಾ ಮೊಯಿತ್ರಾ ಹಾಗೂ ಅನಂತ್ ದೇಹಾದ್ರೆಯಿ, ನಂತರ ಬೇರ್ಪಟ್ಟಿದ್ದರು. ವಿಚಾರಣಾ ನ್ಯಾಯಾಲಯದೆದುರು ಮಹುವಾ ಮೊಯಿತ್ರಾ ಸಲ್ಲಿಸಿರುವ ಅರ್ಜಿಯಲ್ಲಿ ರಾಟೊವೀಲರ್ ‘ಹೆನ್ರಿ’ ಸಾಕು ನಾಯಿಯ ಜಂಟಿ ವಾರಸುದಾರಿಕೆಗಾಗಿ ಮನವಿ ಮಾಡಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.
“ಯಾವುದೇ ರೀತಿಯಲ್ಲೂ ಹಾಲಿ ವಿಚಾರಣೆಯನ್ನು ಸಾರ್ವಜನಿಕಗೊಳಿಸಬಾರದು” ಎಂದು ವಿಚಾರಣಾ ನ್ಯಾಯಾಲಯ ನೀಡಿರುವ ಸೂಚನೆಯನ್ನು ಅನಂತ್ ದೇಹಾದ್ರೆಯಿ ದಿಲ್ಲಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ.
ಈ ಆದೇಶ ನಿರಂಕುಶವಾಗಿದ್ದು, ಮಹುವಾ ಮೊಯಿತ್ರಾ ದಾಖಲಿಸಿರುವ ಮೊಕದ್ದಮೆಯನ್ನು ನಾನು ಸಾರ್ವಜನಿಕವಾಗಿ ಯಾರ ಬಳಿಯೂ ಬಹಿರಂಗಗೊಳಿಸದಂತೆ ನಿರ್ಬಂಧಿಸಿದೆ ಎಂದು ಆರೋಪಿಸಿದ್ದಾರೆ.







