ಕಾನ್ಪುರ ಐಐಟಿಯಲ್ಲಿ ಪಿ ಎಚ್ ಡಿ ವಿದ್ಯಾರ್ಥಿನಿ ಆತ್ಮಹತ್ಯೆ

ಕಾನ್ಪುರ ಐಐಟಿ | Photo : PTI
ಕಾನ್ಪುರ: ಕಾನ್ಪುರ ಐಐಟಿಯ ಪಿ ಎಚ್ ಡಿ ವಿದ್ಯಾರ್ಥಿನಿಯೋರ್ವರು ಇಲ್ಲಿನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಐಟಿ ಕಾನ್ಪುರ ಕ್ಯಾಂಪಸ್ನಲ್ಲಿ ಒಂದು ತಿಂಗಳಲ್ಲಿ ನಡೆಯುತ್ತಿರುವ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಪ್ರಿಯಾಂಕಾ ಜೈಸ್ವಾಲ್ ಎಂದು ಗುರುತಿಸಲಾಗಿದೆ. ಜಾರ್ಖಂಡ್ ನ ಧುಮ್ಕಾ ನಿವಾಸಿಯಾಗಿರುವ ಜೈಸ್ವಾಲ್ ಕೆಮಿಕಲ್ ಎಂಜಿನಿಯರಿಂಗ್ ನಲ್ಲಿ ಪಿ ಎಚ್ ಡಿ ಪಡೆಯಲು ಕಳೆದ ವರ್ಷ ಡಿಸೆಂಬರ್ 29ರಂದು ಐಐಟಿ ಕಾನ್ಪುರಕ್ಕೆ ಪ್ರವೇಶ ಪಡೆದಿದ್ದರು.
ಈ ಬಗ್ಗೆ ಮಾಹಿತಿ ನೀಡಿರುವ ಹೆಚ್ಚುವರಿ ಡಿಸಿಪಿ (ಪಶ್ಚಿಮ) ಆಕಾಶ್ ಪಟೇಲ್, ಜೈಸ್ವಾಲ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ರಾತ್ರಿ ಸಮಾರು 1 ಗಂಟೆಗೆ ಮಾಹಿತಿ ಸ್ವೀಕರಿಸಿದ್ದರು. ಅವರು ಸ್ಥಳಕ್ಕೆ ತಲುಪಿದಾಗ ಜೈಸ್ವಾಲ್ ಕೊಠಡಿಯ ಬಾಗಿಲ ಚಿಲಕ ಒಳಗಿನಿಂದ ಹಾಕಿರುವುದು ಕಂಡು ಬಂತು. ಅವರು ಬಾಗಿಲು ಒಡೆದು ನೋಡಿದಾಗ ಜೈಸ್ವಾಲ್ ಅವರ ಮೃತದೇಹ ಪತ್ತೆಯಾಯಿತು ಎಂದು ತಿಳಿಸಿದ್ದಾರೆ.
ಹಾಸ್ಟೆಲ್ ನಲ್ಲಿರುವ ಇತರ ವಿದ್ಯಾರ್ಥಿಗಳು ಐಐಟಿ-ಕಾನ್ಪುರದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದರು ಎಂದು ಪಟೇಲ್ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆ ಹಾಗೂ ಇತರ ಔಪಚಾರಿಕತೆಗಳು ಪೂರ್ಣಗೊಂಡ ಬಳಿಕ ಜೈಸ್ವಾಲ್ ಆತ್ಮಹತ್ಯೆ ಹಿಂದಿನ ಕಾರಣ ಬಹಿರಂಗಗೊಳ್ಳುವ ಸಾಧ್ಯತೆ ಇದೆ ಎಂದು ಪಟೇಲ್ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಐಐಟಿ-ಕಾನ್ಪುರ, ‘‘ಪಿ ಎಚ್ ಡಿ ವಿದ್ಯಾರ್ಥಿನಿ ಪ್ರಿಯಾಂಕಾ ಜೈಸ್ವಾಲ್ ಅವರು ಹಾಸ್ಟೆಲ್ ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ತಿಂಗಳು (2023 ಡಿಸೆಂಬರ್) ಸಂಸ್ಥೆಯ ಕೆಮಿಕಲ್ ಎಂಜಿನಿಯರಿಂಗ್ ವಿಭಾಗಕ್ಕೆ ಅವರು ಪ್ರವೇಶ ಪಡೆದಿದ್ದರು. ಅವರ ಅಕಾಲಿಕ ನಿಧನಕ್ಕೆ ಐಐಟಿ ಕಾನ್ಪುರ ಸಂತಾಪ ವ್ಯಕ್ತಪಡಿಸುತ್ತದೆ’’ ಎಂದು ಹೇಳಿದೆ.
‘‘ಸಾವಿನ ಕಾರಣ ಪರಿಶೀಲಿಸಲು ಪೊಲೀಸ್ ವಿಧಿವಿಜ್ಞಾನ ತಂಡ ಕ್ಯಾಂಪಸ್ ಗೆ ಭೇಟಿ ನೀಡಿದೆ. ಸಾವಿನ ಕಾರಣವನ್ನು ನಿರ್ಧರಿಸಲು ಪೊಲೀಸ್ ತನಿಖೆಯನ್ನು ಸಂಸ್ಥೆ ನಿರೀಕ್ಷಿಸುತ್ತಿದೆ’’ ಎಂದು ಅದು ಹೇಳಿದೆ.







