ತಾಜ್ ಮಹಲ್ ನಿರ್ಮಿಸಿದ್ದು ಶಾಹ್ ಜಹಾನ್ ಅಲ್ಲ, ಇತಿಹಾಸ ಪುಸ್ತಕಗಳಲ್ಲಿನ ತಪ್ಪುಗಳನ್ನು ತಿದ್ದಬೇಕು ಎಂದು ಹೈಕೋರ್ಟ್ ಗೆ ಅರ್ಜಿ

ತಾಜ್ ಮಹಲ್ (PTI)
ಹೊಸದಿಲ್ಲಿ: ಐತಿಹಾಸಿಕ ಸ್ಮಾರಕ ತಾಜ್ ಮಹಲ್ನ ಸರಿಯಾದ ಇತಿಹಾಸವನ್ನು ಪ್ರಕಟಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ದಿಲ್ಲಿ ಹೈಕೋರ್ಟ್ ಮುಂದೆ ಹಿಂದೂ ಸೇನಾ ಅಧ್ಯಕ್ಷ ಸುರ್ಜಿತ್ ಸಿಂಗ್ ಯಾದವ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ತಾಜ್ ಮಹಲ್ ಮೂಲತಃ ರಾಜಾ ಮನ್ ಸಿಂಗ್ನ ಅರಮನೆಯಾಗಿತ್ತು ಅದನ್ನು ನಂತರ ಮುಘಲ್ ದೊರೆ ಶಾಹ್ ಜಹಾನ್ ನವೀಕರಿಸಿದ್ದ ಎಂದು ಅರ್ಜಿದಾರರು ವಾದಿಸಿದ್ದಾರೆ. ತಾಜ್ ಮಹಲ್ ಕುರಿತು ಇತಹಾಸ ಪುಸ್ತಕಗಳಲ್ಲಿರುವ ತಪ್ಪುಗಳನ್ನು ತೆಗೆದು ಹಾಕುವಂತೆ ಪುರಾತತ್ವ ಇಲಾಖೆ, ಕೇಂದ್ರ ಸರ್ಕಾರ, ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ನಿರ್ದೇಶಿಸಬೇಕೆಂದೂ ಅರ್ಜಿದಾರರು ಕೋರಿದ್ದಾರೆ.
ತಾಜ್ ಮಹಲ್ ನಿರ್ಮಾಣವಾಗಿ ಎಷ್ಟು ವರ್ಷವಾಯಿತು ಹಾಗೂ ಅಲ್ಲಿ ರಾಜಾ ಮನ್ ಸಿಂಗ್ನ ಅರಮನೆಯಿತ್ತೇ ಎಂದು ತನಿಖೆ ನಡೆಸುವಂತೆ ಪುರಾತತ್ವ ಇಲಾಖೆಗೆ ಸೂಚಿಸಬೇಕೆಂದೂ ಅರ್ಜಿಯಲ್ಲಿ ಕೋರಲಾಗಿದೆ.
ಈ ಆರ್ಜಿಯ ವಿಚಾರಣೆ ಇಂದು ದಿಲ್ಲಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ಹಾಗೂ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ಪೀಠದ ಮುಂದೆ ವಿಚಾರಣೆಗೆ ಬರಲಿದೆ.
ತಾನು ತಾಜ್ಮಹಲ್ ಬಗ್ಗೆ ಬಹಳಷ್ಟು ಅಧ್ಯಯನ ನಡೆಸಿದ್ದಾಗಿ ಹೇಳಿರುವ ಅರ್ಜಿದಾರರು ಒಂದು ಪುಸ್ತಕದಲ್ಲಿ ಶಾಹ್ ಜಹಾನ್ನ ಪತ್ನಿ ಆಲಿಯಾ ಬೇಗಂ ಎಂಬುದಾಗಿ ಇದೆ ಹಾಗೂ ಮುಮ್ತಾಝ್ ಮಹಲ್ ಉಲ್ಲೇಖವಿಲ್ಲ ಎಂದಿದ್ದಾರೆ.
ತಾನು ಝೆಡ್ ಎ ದೇಸಾಯಿ ಅವರ “ತಾಜ್ ಮ್ಯೂಸಿಯಂ” ಎಂಬ ಪುಸ್ತಕವನ್ನು ಪರಿಶೀಲಿಸಿದ್ದಾಗಿ ಹಾಗೂ ಅದರಲ್ಲಿ ಮುಮ್ತಾಝ್ ಮಹಲ್ ಸಮಾಧಿಗಾಗಿ ಎತ್ತರದ ಸುಂದರ ಸ್ಥಳ ಆಯ್ದುಕೊಳ್ಳಲಾಯಿತು ಹಾಗೂ ಅದು ರಾಜಾ ಮನ್ ಸಿಂಗ್ನ ಅರಮನೆಯಾಗಿತ್ತು ಹಾಗೂ ಅದು ಆಗ ಆತನ ಮೊಮ್ಮಗ ರಾಜಾ ಜೈ ಸಿಂಗ್ ಬಳಿ ಇತ್ತು, ಈ ಅರಮನೆಯನ್ನು ಕೆಡವಲಾಗಲಿಲ್ಲ, ಬದಲು ಪ್ರಸ್ತುತ ಇರುವ ಕಟ್ಟಡವು ಆ ಅರಮನೆಯನ್ನು ನವೀಕರಿಸಿ ಮಾಡಲಾಗಿದೆ ಎಂದು ಬರೆಯಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ತಾಜ್ ಮಹಲ್ ಕುರಿತು ಪುರಾತತ್ವ ಸರ್ವೇಕ್ಷಣಾ ಇಲಾಖೆ ಕೂಡ ವೈರುಧ್ಯದ ಮಾಹಿತಿಯನ್ನು ತನ್ನ ವೆಬ್ಸೈಟ್ನಲ್ಲಿ ನೀಡಿದೆ ಎಂದೂ ಅರ್ಜಿದಾರರು ವಾದಿಸಿದ್ದಾರೆ.
ಪುರಾತತ್ವ ಇಲಾಖೆಯ ವೆಬ್ಸೈಟ್ನಲ್ಲಿ ಒಂದು ಕಡೆ, ಮುಮ್ತಾಝ್ ಮಹಲ್ 1631ರಲ್ಲಿ ಮೃತಪಟ್ಟ ಆರು ತಿಂಗಳ ನಂತರ ಆಕೆಯ ಕಳೇಬರವನ್ನು ತಾಜ್ ಮಹಲ್ನಲ್ಲಿ ಸಮಾಧಿ ಮಾಡಲು ವರ್ಗಾಯಿಸಲಾಯಿತು ಎಂದು ಹೇಳಲಾಗಿದೆ, ಅದೇ ವೆಬ್ ಪುಟದಲ್ಲಿ ತಾಜ್ ಮಹಲ್ ಸಂಕೀರ್ಣ ನಿರ್ಮಾಣ ಪೂರ್ಣಗೊಳ್ಳಲು 17 ವರ್ಷ ಬೇಕಾಯಿತು ಹಾಗು 1648ರಲ್ಲಿ ಪೂರ್ಣಗೊಳಿಸಲಾಯಿತು ಎಂದು ಹೇಳಲಾಗಿದೆ ಎಂದು ಅರ್ಜಿದಾರರು ಹೇಳಿಕೊಂಡಿದ್ದಾರೆ.







