ಧರ್ಮದ ಹೆಸರಿನಲ್ಲಿ ಮತಯಾಚಿಸಿದ್ದಕ್ಕೆ ಪ್ರಧಾನಿ ಮೋದಿ 6 ವರ್ಷ ಚುನಾವಣೆ ಸ್ಪರ್ಧಿಸುವುದರಿಂದ ನಿರ್ಬಂಧಿಸಬೇಕೆಂದು ಕೋರಿ ದಿಲ್ಲಿ ಹೈಕೋರ್ಟಿಗೆ ಪಿಐಎಲ್

ನರೇಂದ್ರ ಮೋದಿ | PC : PTI
ಹೊಸದಿಲ್ಲಿ: ದೇವರು ಮತ್ತು ದೇವಸ್ಥಾನದ ಹೆಸರಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಜನರಲ್ಲಿ ಮತ ಯಾಚಿಸಿ ಮಾದರಿ ನೀತಿ ಸಂಹಿತೆಯನ್ನು ಪ್ರಧಾನಿ ನರೇಂದ್ರ ಮೋದಿ ಉಲ್ಲಂಘಿಸಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಕ್ರಮ ಕೋರಿ ದಿಲ್ಲಿ ಹೈಕೋರ್ಟಿಗೆ ಪಿಐಎಲ್ ಸಲ್ಲಿಸಲಾಗಿದೆ.
ಆನಂದ್ ಎಸ್ ಜೊಂಢಾಲೆ ಎಂಬ ವಕೀಲರು ಈ ಪಿಐಎಲ್ ಸಲ್ಲಿಸಿದ್ದು ಉತ್ತರ ಪ್ರದೇಶದ ಪಿಲಿಭೀತ್ ಕ್ಷೇತ್ರದಲ್ಲಿ ಎಪ್ರಿಲ್ 9ರಂದು ಪ್ರಧಾನಿ ಮಾಡಿದ ಭಾಷಣವನ್ನು ಅದರಲ್ಲಿ ಉಲ್ಲೇಖಿಸಲಾಗಿದೆ.
“ಹಿಂದು ದೇವರುಗಳು ಮತ್ತು ಆರಾಧನಾಲಯಗಳು ಮತ್ತು ಸಿಖ್ ದೇವರುಗಳು ಮತ್ತು ಆರಾಧನಾಲಯಗಳ” ಹೆಸರಿನಲ್ಲಿ ಬಿಜೆಪಿಗೆ ಮತ ನೀಡುವಂತೆ ತಮ್ಮ ಭಾಷಣದಲ್ಲಿ ಮೋದಿ ಮತದಾರರನ್ನು ಕೇಳಿದ್ದರಲ್ಲದೆ ವಿಪಕ್ಷಗಳು ಮುಸ್ಲಿಮರ ಪರ ಎಂದು ಹೇಳಿದ್ದರೆಂದು ಪಿಐಎಲ್ನಲ್ಲಿ ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಆರು ವರ್ಷಗಳ ಕಾಲ ಚುನಾವಣೆ ಸ್ಪರ್ಧಿಸುವುದರಿಂದ ಮೋದಿ ಅವರನ್ನು ಅನರ್ಹಗೊಳಿಸಬೇಕೆಂದು ಪಿಐಎಲ್ನಲ್ಲಿ ಕೋರಲಾಗಿದೆ.
“ರಾಮ ಮಂದಿರ ನಿರ್ಮಿಸಿದ್ದಾಗಿ, ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಅಭಿವೃದ್ಧಿಪಡಿಸಿದ್ದಾಗಿ ಹಾಗೂ ಗುರುದ್ವಾರಗಳಲ್ಲಿರುವ ಲಂಗರ್ನಲ್ಲಿ ಬಳಸುವ ಸಾಮಗ್ರಿಗಳಿಗೆ ಜಿಎಸ್ಟಿ ವಿನಾಯಿತಿ ನೀಡಿರುವುದಾಗಿ, ಅಫ್ಗಾನಿಸ್ತಾನದಿಂದ ಗುರು ಗ್ರಂಥ್ ಸಾಹಿಬ್ ಪ್ರತಿಗಳನ್ನು ವಾಪಸ್ ತಂದಿರುವುದಾಗಿ ಭಾಷಣದಲ್ಲಿ ಪ್ರತಿವಾದಿ (ಪ್ರಧಾನಿ) ಹೇಳಿದ್ದರು,” ಎಂದು ಪಿಐಎಲ್ನಲ್ಲಿ ಹೇಳಲಾಗಿದೆ.
ತಾವು ಈಗಾಗಲೇ ಈ ಕುರಿತು ಚುನಾವಣಾ ಆಯೋಗಕ್ಕೆ ದೂರಿ ಐಪಿಸಿ ಸೆಕ್ಷನ್ 153ಎ ಅಡಿ ಪ್ರಧಾನಿ ವಿರುದ್ಧ ಎಫ್ಐಆರ್ ದಾಖಲಿಸಿ ಅವರನ್ನು ಆರು ವರ್ಷ ಚುನಾವಣೆ ಸ್ಪರ್ಧಿಸುವುದರಿಂದ ನಿರ್ಬಂಧಿಸಬೇಕೆಂದು ಕೋರಿದ್ದರೂ ಕ್ರಮಕೈಗೊಳ್ಳಲಾಗಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.







