‘‘ನೀವು ಇಂಧನ ಪೂರೈಕೆಯನ್ನು ಯಾಕೆ ನಿಲ್ಲಿಸಿದಿರಿ?’’ ಎಂದು ಇನ್ನೊಬ್ಬ ಪೈಲಟ್ ರನ್ನು ಕೇಳಿದ ಪೈಲಟ್!
► ಇಂಧನ ನಿಯಂತ್ರಣ ಸ್ವಿಚ್ ದೋಷದ ಬಗ್ಗೆ ಎಚ್ಚರಿಕೆ ಮೊದಲೇ ಇತ್ತು ► ಅಹ್ಮದಾಬಾದ್ ವಿಮಾನ ಅಪಘಾತ ಕುರಿತ ಪ್ರಾಥಮಿಕ ತನಿಖಾ ವರದಿ ಬಹಿರಂಗ

ಹೊಸದಿಲ್ಲಿ: ಒಂದು ತಿಂಗಳ ಹಿಂದೆ ಅಹ್ಮದಾಬಾದ್ ನಲ್ಲಿ ಏರ್ ಇಂಡಿಯಾದ ಎಐ-171 ವಿಮಾನ ಪತನಗೊಳ್ಳಲು ಅದರ ಇಂಜಿನ್ ಗಳಿಗೆ ಇಂಧನ ಪೂರೈಕೆ ನಿಂತಿರುವುದೇ ಕಾರಣ ಎಂದು ಅಪಘಾತದ ಪ್ರಾಥಮಿಕ ತನಿಖಾ ವರದಿ ಹೇಳಿದೆ. ಅಪಘಾತದ ಬಗ್ಗೆ ತನಿಖೆ ನಡೆಸುತ್ತಿರುವ ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ)ಯ 15 ಪುಟಗಳ ಪ್ರಾಥಮಿಕ ವರದಿಯನ್ನು ಶನಿವಾರ ಮುಂಜಾನೆ ಪ್ರಕಟಿಸಲಾಗಿದೆ.
ಜೂನ್ 12ರಂದು ಮಧ್ಯಾಹ್ನ 242 ಮಂದಿಯನ್ನು ಹೊತ್ತು ಲಂಡನ್ ಗೆ ಹೋಗುತ್ತಿದ್ದ ಬೋಯಿಂಗ್ ಡ್ರೀಮ್ ಲೈನರ್ 787-8 ವಿಮಾನವು ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೇವಲ ಒಂದು ನಿಮಿಷದಲ್ಲಿ ಸಮೀಪದ ವೈದ್ಯಕೀಯ ಕಾಲೇಜೊಂದರ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿ ಬೆಂಕಿಯ ಉಂಡೆಯಾಗಿ ಸಿಡಿಯಿತು. ದುರಂತದಲ್ಲಿ ವಿಮಾನದಲ್ಲಿದ್ದ 241 ಮಂದಿ, ಹಾಸ್ಟೆಲ್ ನಲ್ಲಿದ್ದ ವೈದ್ಯಕೀಯ ಕಾಲೇಜ್ ನ ವಿದ್ಯಾರ್ಥಿಗಳು ಮತ್ತು ನೆಲದಲ್ಲಿದ್ದ ಇತರರು ಸೇರಿದಂತೆ ಕನಿಷ್ಠ 270 ಮಂದಿ ಮೃತಪಟ್ಟಿದ್ದಾರೆ. ಅದೇ ವೇಳೆ, ಭಾರತದಲ್ಲಿ ದಶಕಗಳಲ್ಲೇ ನಡೆದ ಅತ್ಯಂತ ಭೀಕರ ವಿಮಾನ ಅಪಘಾತದಲ್ಲಿ, ಒಬ್ಬ ಪ್ರಯಾಣಿಕ ಪವಾಡ ಸದೃಶವೆಂಬಂತೆ ಬದುಕುಳಿದಿದ್ದಾರೆ.
ವಿಮಾನವು ನೆಲ ಬಿಟ್ಟು ಆಕಾಶಕ್ಕೆ ನೆಗೆದ (ಟೇಕಾಫ್) ಬಳಿಕ, ಕೆಲವೇ ಸೆಕೆಂಡ್ ಗಳಲ್ಲಿ ಎರಡೂ ಇಂಜಿನ್ ಗಳ ಇಂಧನ ಪೂರೈಕೆಯನ್ನು ನಿಯಂತ್ರಿಸುವ ಗುಂಡಿ (ಸ್ವಿಚ್)ಗಳು ‘ರನ್’ (ಇಂಧನ ಹರಿವು)ನಿಂದ ‘ಕಟ್-ಆಫ್’ (ಸ್ಥಗಿತ)ಗೆ ಪಲ್ಲಟಗೊಂಡವು ಎನ್ನುವುದರತ್ತ ಪ್ರಾಥಮಿಕ ವರದಿ ಬೆಟ್ಟು ಮಾಡಿದೆ.
‘‘ನೀವು ಇಂಧನ ಪೂರೈಕೆಯನ್ನು ಯಾಕೆ ನಿಲ್ಲಿಸಿದಿರಿ?’’ ಎಂಬುದಾಗಿ ಒಬ್ಬ ಪೈಲಟ್ ಇನ್ನೊಬ್ಬ ಪೈಲಟ್ ರನ್ನು ಕೇಳುವುದು ಕಾಕ್ ಪಿಟ್ ವಾಯ್ಸ್ ರೆಕಾರ್ಡಿಂಗ್ ನಲ್ಲಿ ದಾಖಲಾಗಿದೆ. ಅದಕ್ಕೆ ಪ್ರತಿಕ್ರಿಯಿಸಿದ ಇನ್ನೋರ್ವ ಪೈಲಟ್, ‘‘ಇಲ್ಲ, ನಾನು ನಿಲ್ಲಿಸಿಲ್ಲ’’ ಎಂದು ಉತ್ತರಿಸುತ್ತಾರೆ.
ಇಂಧನ ಪೂರೈಕೆ ನಿಯಂತ್ರಣ ಗುಂಡಿಯು ‘ಕಟ್-ಆಫ್’ಗೆ ಪಲ್ಲಟಗೊಂಡಾಗ ವಿಮಾನದ ಇಂಜಿನ್ ಗಳಿಗೆ ಇಂಧನ ಪೂರೈಕೆಯು ನಿಂತಿತು. ಕ್ಷಣಗಳ ಬಳಿಕ, ಎರಡೂ ಇಂಜಿನ್ ಗಳ ಇಂಧನ ನಿಯಂತ್ರಣ ಗುಂಡಿಗಳು ‘ಕಟ್-ಆಫ್’ನಿಂದ ‘ರನ್’ಗೆ ತಿರುಗಿದವು ಎನ್ನುವುದು ಎನ್ ಹಾನ್ಸ್ ಡ್ ಏರ್ ಬೋರ್ನ್ ಫ್ಲೈಟ್ ರೆಕಾರ್ಡರ್ (ಇಎಎಫ್‌ಆರ್)ಗಳಿಂದ ಪಡೆಯಲಾಗಿರುವ ದತ್ತಾಂಶಗಳಿಂದ ತಿಳಿದುಬಂದಿದೆ. ಆಗಿರುವ ಹಾನಿಯನ್ನು ಸರಿಪಡಿಸಲು ಪೈಲಟ್ ಗಳು ಪ್ರಯತ್ನಿಸಿದ್ದರು ಎನ್ನುವುದನ್ನು ಇದು ಸೂಚಿಸುತ್ತದೆ.
ವಿಮಾನದ ಟೇಕಾಫ್ ಪೂರ್ಣಗೊಳ್ಳಲು ಬೇಕಿರುವುದಕ್ಕಿಂತಲೂ ಹೆಚ್ಚಿನ ಶಕ್ತಿ ಒಂಟಿ ಇಂಜಿನ್ ನಿಂದಲೇ ಸಿಗುತ್ತದೆ. ಹಾಗೂ, ಇಂಥ ಪರಿಸ್ಥಿತಿಗಳಿಗೆ ಪೈಲಟ್ ಗಳು ಸಿದ್ಧರಾಗಿಯೇ ಇರುತ್ತಾರೆ.
‘‘ವಿಮಾನವು ಹಾರಾಟದಲ್ಲಿರುವ ವೇಳೆ, ಇಂಧನ ನಿಯಂತ್ರಣ ಸ್ವಿಚ್‌ಗಳು ‘ಕಟ್-ಆಫ್’ನಿಂದ ‘ರನ್’ಗೆ ತಿರುಗಿದಾಗ, ಪ್ರತಿ ಇಂಜಿನ್‌ನ ‘ಫುಲ್ ಅಥಾರಿಟಿ ಡುಯಲ್ ಇಂಜಿನ್ ಕಂಟ್ರೋಲ್ (ಎಫ್‌ಎಡಿಇಸಿ)’ ವ್ಯವಸ್ಥೆಯು ಸ್ವಯಂಚಾಲಿತವಾಗಿ ಇಂಜಿನನ್ನು ಮರುಚಾಲನೆಗೊಳಿಸುತ್ತದೆ ಹಾಗೂ ವೇಗ ಮರುಗಳಿಕೆ ಪ್ರಕ್ರಿಯೆಗೆ ಚಾಲನೆ ನೀಡುತ್ತದೆ’’ ಎಂದು ವರದಿ ಹೇಳುತ್ತದೆ.
ಆದರೆ, ಇಎಎಫ್‌ಆರ್ ದಾಖಲೀಕರಣವು ಸೆಕೆಂಡ್ ಗಳ ಬಳಿಕ ನಿಂತಿತು. ಅದರ ಬಳಿಕ ತಕ್ಷಣ ಓರ್ವ ಪೈಲಟ್ ‘ಮೇಡೇ’ (ಅಪಾಯದ ತುರ್ತು ಸಂದೇಶ) ಸಂದೇಶ ಹೊರಡಿಸಿದರು. ಆಗ ವಾಯು ಸಂಚಾರ ನಿಯಂತ್ರಣವು ಅದರ ಬಗ್ಗೆ ಪ್ರಶ್ನಿಸಿತು. ಆದರೆ, ಅದಕ್ಕೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ, ವಿಮಾನವು ವಿಮಾನ ನಿಲ್ದಾಣದ ಆವರಣದ ಹೊರಗೆ ಪತನಗೊಳ್ಳುತ್ತಿರುವುದನ್ನು ವಾಯು ಸಂಚಾರ ನಿಯಂತ್ರಣದ ಸಿಬ್ಬಂದಿ ನೋಡಿದರು.
ಸುಮಾರು 1.25 ಲಕ್ಷ ಲೀಟರ್ ಇಂಧನ ಹೊಂದಿದ್ದ ವಿಮಾನವು ಕುಸಿಯುತ್ತಾ ಸಾಗಿತು ಹಾಗೂ ಅಂತಿಮವಾಗಿ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಅಪ್ಪಳಿಸಿತು. ವಿಮಾನವು ಆಕಾಶದಲ್ಲಿ ಕೇವಲ 32 ಸೆಕೆಂಡ್ ಗಳ ಕಾಲ ಮಾತ್ರವಿತ್ತು.
ವಿಮಾನವನ್ನು 8,200 ಗಂಟೆಗಳ ಹಾರಾಟ ಅನುಭವವಿರುವ ಲೈನ್ ಟ್ರೇನಿಂಗ್ ಕ್ಯಾಪ್ಟನ್ ಆಗಿರುವ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಚಲಾಯಿಸುತ್ತಿದ್ದರು. ಅವರಿಗೆ 1,100 ಗಂಟೆಗಳ ಹಾರಾಟ ಅನುಭವವಿರುವ ಫಸ್ಟ್ ಆಫಿಸರ್ ಕ್ಲೈವ್ ಕುಂದರ್ ಸಹಾಯಕರಾಗಿದ್ದರು. ಇಬ್ಬರೂ ಪೈಲಟ್ ಗಳು ವೈದ್ಯಕೀಯವಾಗಿ ಕ್ಷಮತೆ ಹೊಂದಿದ್ದರು ಮತ್ತು ವಿಶ್ರಾಂತಿ ಪಡೆದಿದ್ದರು ಹಾಗೂ ಸಾಕಷ್ಟು ಅನುಭವ ಹೊಂದಿದ್ದರು ಎಂದು ವರದಿ ಹೇಳಿದೆ.
1980ರ ದಶಕದಲ್ಲಿ, ಡೆಲ್ಟಾ ಏರ್ ಲೈನ್ಸ್ ವಿಮಾನವೊಂದರ ಪೈಲಟ್ ತಪ್ಪಾಗಿ ಬೋಯಿಂಗ್ 767 ವಿಮಾನದ ಇಂಜಿನ್ ಗಳಿಗೆ ಇಂಧನ ಸ್ಥಗಿತಗೊಳಿಸಿದರು. ಆದರೆ, ಆ ಪ್ರಕರಣದಲ್ಲಿ ವಿಮಾನ ಆಕಾಶದಲ್ಲಿ ಸಾಕಷ್ಟು ಎತ್ತರದಲ್ಲಿತ್ತು. ಹಾಗಾಗಿ, ಇಂಧನ ಪೂರೈಕೆಯನ್ನು ಮರುಸ್ಥಾಪಿಸುವಲ್ಲಿ ಅವರು ಯಶಸ್ವಿಯಾದರು ಹಾಗೂ ದುರಂತವೊಂದು ತಪ್ಪಿತು.
ಸಮಗ್ರ ತನಿಖೆ ಚಾಲ್ತಿಯಲ್ಲಿದ್ದು, ಇನ್ನು ಕೆಲವು ತಿಂಗಳುಗಳಲ್ಲಿ ಅಂತಿಮ ವರದಿ ಸಲ್ಲಿಕೆಯಾಗಬಹುದು.
►ಇಂಧನ ನಿಯಂತ್ರಣ ಸ್ವಿಚ್ ದೋಷದ ಬಗ್ಗೆ ಎಚ್ಚರಿಕೆ ಮೊದಲೇ ಇತ್ತು: ಬೆಟ್ಟು ಮಾಡಿದ ವರದಿ
ವಿಮಾನ ಪತನಕ್ಕೆ ಬುಡಮೇಲು ಕೃತ್ಯ ಕಾರಣ ಎನ್ನುವುದನ್ನು ತೋರಿಸುವ ಪುರಾವೆ ತಕ್ಷಣಕ್ಕೆ ಪತ್ತೆಯಾಗಿಲ್ಲ ಎಂದು ವರದಿ ಹೇಳಿದೆ. ಆದರೆ, ಇಂಧನ ನಿಯಂತ್ರಣ ಗುಂಡಿಯ ಸಂಭಾವ್ಯ ದೋಷದ ಬಗ್ಗೆ ಅಮೆರಿಕದ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಶನ್ (ಎಫ್‌ಎಎ) ಏಳು ವರ್ಷಗಳ ಹಿಂದೆಯೇ ಹೊರಡಿಸಿರುವ ಎಚ್ಚರಿಕೆಯತ್ತ ಅದು ಬೆಟ್ಟು ಮಾಡಿದೆ.
ಭದ್ರಪಡಿಸುವ (ಲಾಕಿಂಗ್) ವ್ಯವಸ್ಥೆಯಿಲ್ಲದೆಯೇ ಇಂಧನ ನಿಯಂತ್ರಣ ಸ್ವಿಚ್ ಗಳನ್ನು ಅಳವಡಿಸಲಾಗಿದೆ ಎಂಬುದಾಗಿ ಬೋಯಿಂಗ್ 737 ಮಾದರಿಯ ವಿಮಾನಗಳನ್ನು ನಡೆಸುತ್ತಿರುವವರು ಸಲ್ಲಿಸಿರುವ ವರದಿಗಳ ಆಧಾರದಲ್ಲಿ ಎಫ್‌ಎಎ ತನ್ನ ಎಚ್ಚರಿಕೆಯನ್ನು ಹೊರಡಿಸಿತ್ತು.
‘‘ಈ ಎಚ್ಚರಿಕೆಯನ್ನು ಅಪಾಯಕಾರಿ ಎಂಬುದಾಗಿ ಪರಿಗಣಿಸಲಾಗಿಲ್ಲ’’ ಎಂದು ವರದಿ ಹೇಳಿದೆ.
ಇಂಧನ ನಿಯಂತ್ರಣ ಸ್ವಿಚ್ ದೋಷ ಕುರಿತ ಎಚ್ಚರಿಕೆಗೆ ಸಂಬಂಧಿಸಿದ ತಪಾಸಣೆಗಳನ್ನು ತಾನು ನಡೆಸಿಲ್ಲ ಎಂದು ಏರ್ ಇಂಡಿಯಾವು ತನಿಖಾ ತಂಡಕ್ಕೆ ತಿಳಿಸಿದೆ. ಯಾಕೆಂದರೆ, ಆ ಎಚ್ಚರಿಕೆಯು ಸಲಹಾ ರೂಪದಲ್ಲಿತ್ತೇ ಹೊರತು ಕಡ್ಡಾಯವಾಗಿರಲಿಲ್ಲ ಎಂದು ಅದು ಹೇಳಿದೆ.
ವಿಮಾನವು ನೆಲದಿಂದ ಆಕಾಶಕ್ಕೆ ನೆಗೆದ ಬಳಿಕ ತಕ್ಷಣವೇ ರ‍್ಯಾಮ್ ಏರ್ ಟರ್ಬೈನ್ (ಆರ್‌ಎಟಿ) ನಿಯೋಜನೆಯಾಗಿತ್ತು ಎಂದು ವರದಿಯು ಹೇಳಿದೆ. ಆರ್‌ಎಟಿ ನಿಯೋಜನೆಯಾಗಿರುವುದು ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಗಳಲ್ಲಿ ಕಾಣುತ್ತದೆ. ಎರಡೂ ಇಂಜಿನ್ ಗಳು ವಿಫಲವಾದಾಗ ಅಥವಾ ಸಂಪೂರ್ಣ ಇಲೆಕ್ಟ್ರಾನಿಕ್ ಅಥವಾ ಹೈಡ್ರಾಲಿಕ್ ವೈಫಲ್ಯ ಸಂಭವಿಸಿದಾಗ ಆರ್ ಎ ಟಿ ನಿಯೋಜನೆಯಾಗುತ್ತದೆ.
‘‘ವಿಮಾನದ ಹಾರಾಟ ಮಾರ್ಗದ ಆಸುಪಾಸಿನಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹಕ್ಕಿಗಳ ಹಾರಾಟ ಪತ್ತೆಯಾಗಿಲ್ಲ. ವಿಮಾನ ನಿಲ್ದಾಣದ ಆವರಣ ಗೋಡೆಯನ್ನು ದಾಟುವ ಮೊದಲೇ ವಿಮಾನವು ಕುಸಿಯಲು ಆರಂಭಿಸಿತ್ತು’’ ಎಂದು ವರದಿ ಹೇಳಿದೆ.
►7 ವರ್ಷ ಹಿಂದೆಯೇ ಈ ದೋಷವನ್ನು ಎತ್ತಿ ತೋರಿಸಿದ್ದ ಅಮೆರಿಕ ವಾಯಯಾನ ಸಂಸ್ಥೆ
ಜೂನ್ 12ರಂದು ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾದ ಎಐ-171 ವಿಮಾನ ಅಪಘಾತಕ್ಕೆ ವಿಮಾನದ ದೋಷಪೂರಿತ ಇಂಧನ ನಿಯಂತ್ರಣ ಸ್ವಿಚ್‌ಗಳು ಕಾರಣ ಎಂಬುದಾಗಿ ಅಪಘಾತದ ಪ್ರಾಥಮಿಕ ತನಿಖಾ ವರದಿ ತಿಳಿಸಿದೆ.
ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಬೋಯಿಂಗ್ ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್ ಗಳಲ್ಲಿ ಇರುವ ಈ ದೋಷವನ್ನು ಅಮೆರಿಕದ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಶನ್ (ಎಫ್‌ಎಎ) ಏಳು ವರ್ಷಗಳ ಹಿಂದೆಯೇ ಎತ್ತಿ ತೋರಿಸಿತ್ತು.
ಬೋಯಿಂಗ್ ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ನ ಲಾಕಿಂಗ್ ವ್ಯವಸ್ಥೆಯಲ್ಲಿ ಇರುವ ಸಂಭಾವ್ಯ ಸಮಸ್ಯೆಗಳ ಬಗ್ಗೆ ಅಮೆರಿಕದ ಎಫ್‌ಎಎ 2018ರಲ್ಲಿ ವಿಶೇಷ ವಾಯುಕ್ಷಮತೆ ಮಾಹಿತಿ ಬುಲೆಟಿನ್ (ವರದಿ) ಹೊರಡಿಸಿತ್ತು.
ಕೆಲವು ಬೋಯಿಂಗ್ 737 ವಿಮಾನಗಳಲ್ಲಿ ಈ ಸ್ವಿಚ್‌ಗಳನ್ನು ಅವುಗಳ ಲಾಕಿಂಗ್ ಕಾರ್ಯವನ್ನು ನಿಷ್ಕ್ರಿಯಗೊಳಿಸಿ ಅಳವಡಿಸಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆ ಬುಲೆಟಿನ್ ಹೊರಡಿಸಲಾಗಿತ್ತು.
ಸ್ವಿಚ್‌ಗಳ ಅನುದ್ದೇಶಿತ ಅಥವಾ ಆಕಸ್ಮಿಕ ಚಲನೆಯನ್ನು ತಡೆಯುವ ಕೆಲಸವನ್ನು ಲಾಕಿಂಗ್ ವ್ಯವಸ್ಥೆ ಮಾಡುತ್ತದೆ. ಆದರೆ ಈ ಲಾಕಿಂಗ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದರೆ ಕಂಪನ, ಅನುದ್ದೇಶಿತ ಸ್ಪರ್ಷ ಅಥವಾ ಇತರ ಕಾರಣಗಳಿಂದಲೂ ಸ್ವಿಚ್‌ಗಳು ಸರಿಯಬಹುದು.
ಕಡ್ಡಾಯ ನಿರ್ದೇಶನವನ್ನು ಹೊರಡಿಸಬೇಕಾದಷ್ಟು ಗಂಭಿರ ವಿಷಯ ಇದಲ್ಲ ಎಂಬುದಾಗಿ ಎಫ್‌ಎಎ ಭಾವಿಸಿತು. ಆದರೆ, ತಪಾಸಣೆಗಳನ್ನು ನಡೆಸುವಂತೆ ಸಲಹೆ ರೂಪದಲ್ಲಿ ಸೂಚನೆಗಳನ್ನು ನೀಡಿತು.
►ವಿಮಾನದ ತಾಂತ್ರಿಕ ನಿರ್ವಹಣೆ ಸರಿಯಾಗಿತ್ತೇ?: ಹೆತ್ತವರನ್ನು ಕಳೆದುಕೊಂಡ ವ್ಯಕ್ತಿಯಿಂದ ಸರಕಾರಕ್ಕೆ ಪ್ರಶ್ನೆ
ಅಹ್ಮದಾಬಾದ್ ನಲ್ಲಿ ತಿಂಗಳ ಹಿಂದೆ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಪ್ರಾಥಮಿಕ ತನಿಖಾ ವರದಿಯು ಬಿಡುಗಡೆಗೊಂಡ ಬಳಿಕ, ಎಐ-171 ವಿಮಾನದ ತಾಂತ್ರಿಕ ಸ್ಥಿತಿಗತಿ ಮತ್ತು ನಿರ್ವಹಣೆ ಶಿಷ್ಟಾಚಾರಗಳ ಬಗ್ಗೆ ಸಂತ್ರಸ್ತರ ಸಂಬಂಧಿಕರು ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖಾ ವರದಿಯ ಹಿನ್ನೆಲೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿರುವ ಯಶ್ ಪಾಲ್ ಸಿಂಗ್ ವನ್ಸ್ ದಿಯ, ಎಲ್ಲಾ ಕಡ್ಡಾಯ ಹಾರಾಟ ಪೂರ್ವ ತಪಾಸಣೆಗಳನ್ನು ಮಾಡಲಾಗಿದೆಯೇ ಎನ್ನುವುದನ್ನು ಸ್ಪಷ್ಟಪಡಿಸುವಂತೆ ಅಧಿಕಾರಿಗಳನ್ನು ಕೇಳಿದ್ದಾರೆ. ಅವರು ಜೂನ್ 12ರ ದುರಂತದಲ್ಲಿ ತನ್ನ ಇಬ್ಬರೂ ಹೆತ್ತವರನ್ನು ಕಳೆದುಕೊಂಡಿದ್ದಾರೆ.
‘‘ಸರಕಾರ ಮತ್ತು ತನಿಖಾ ಸಂಸ್ಥೆಗಳಿಗೆ ನಾನು ಕೆಲವೊಂದು ಪ್ರಶ್ನೆಗಳನ್ನು ಕೇಳಬೇಕಾಗಿದೆ. ನೀವು ಇಂಧನ ಪೂರೈಕೆ ನಿಲ್ಲಿಸಿದ್ದೀರಾ ಎಂಬುದಾಗಿ ಓರ್ವ ಪೈಲಟ್ ಇನ್ನೋರ್ವ ಪೈಲಟನ್ನು ಕೇಳಿದ್ದಾರೆ ಎಂಬುದಾಗಿ ಪ್ರಾಥಮಿಕ ತನಿಖೆ ತಿಳಿಸಿದೆ. ಅದರ ಅರ್ಥ ವಿಮಾನದಲ್ಲಿ ತಾಂತ್ರಿಕ ಸಮಸ್ಯೆಗಳಿತ್ತು ಎನ್ನುವುದಾಗಿದೆ’’ ಎಂದು ಎ ಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು.







