Himachal Pradesh| ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ: ಪೈಲಟ್ ಮೃತ್ಯು

Photo| freepressjournal/ಸಾಂದರ್ಭಿಕ ಚಿತ್ರ
ಕಾಂಗ್ರಾ (ಹಿಮಾಚಲ ಪ್ರದೇಶ): ಪ್ಯಾರಾಗ್ಲೈಡರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಪತನಗೊಂಡ ಪರಿಣಾಮ ಪೈಲಟ್ ಒಬ್ಬರು ಮೃತಪಟ್ಟಿರುವ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಪೈಲಟ್ ಅನ್ನು ಮಂಡಿ ಜಿಲ್ಲೆಯ ನಿವಾಸಿ ಮೋಹನ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಘಟನೆಯು ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಬೀರ್ ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ಸ್ಥಳದಲ್ಲಿ ನಡೆದಿದೆ.
ಬೀರ್ ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ಅಸೋಸಿಯೇಷನ್ ಅಧಿಕಾರಿಗಳ ಪ್ರಕಾರ, ಪ್ಯಾರಾಗ್ಲೈಡರ್ ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದು, ಹಾರಾಟದ ಮಾರ್ಗಮಧ್ಯದಲ್ಲೇ ತನ್ನ ನಿಯಂತ್ರಣ ಕಳೆದುಕೊಂಡಿದೆ. ಬಳಿಕ, ಲಾಂಚ್ ಸೈಟ್ ನಿಂದ ಕೆಳಗಿರುವ ರಸ್ತೆಯೊಂದರ ಮೇಲೆ ಪತನಗೊಂಡಿದೆ. ಈ ಘಟನೆಯಲ್ಲಿ ಪೈಲಟ್ ಮೃತಪಟ್ಟರೆ, ಅವರೊಂದಿಗಿದ್ದ ಪ್ರವಾಸಿಗನಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ರಕ್ಷಣಾ ತಂಡಗಳು, ಪೈಲಟ್ ಹಾಗೂ ಪ್ರವಾಸಿ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಪೈಲಟ್ ಮೋಹನ್ ಸಿಂಗ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ಈ ಅಪಘಾತಕ್ಕೆ ನಿಖರ ಕಾರಣವೇನು ಎಂದು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ.





