ಅಣಕು ಪ್ರದರ್ಶನದಲ್ಲಿ AI-171 ವಿಮಾನದ ಕೊನೆಯ ಕ್ಷಣಗಳನ್ನು ಮರು ಸೃಷ್ಟಿಸಿದ ಪೈಲಟ್ ಗಳು: ಪತ್ತೆಯಾಗಿದ್ದೇನು?

PC : PTI
ಹೊಸದಿಲ್ಲಿ: ಜೂನ್ 12ರಂದು AI-171 ವಿಮಾನ ಅಪಘಾತಕ್ಕೀಡಾಗಿ ಒಂದು ವಾರದ ನಂತರ, ಸುಮಾರು 270ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಆ ವಿಮಾನ ಅಪಘಾತದ ಕೊನೆಯ ಕ್ಷಣಗಳನ್ನು ಏರ್ ಇಂಡಿಯಾ ವಿಮಾನ ಸಂಸ್ಥೆಯ ಬೋಯಿಂಗ್ 787 ವಿಮಾನಗಳ ಮೂಲಕ ಮರು ಸೃಷ್ಟಿಸುವ ಪ್ರಯತ್ನವನ್ನು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಕನಿಷ್ಠ ಮೂರು ಮಂದಿ ತರಬೇತಿ ನಿರತ ಪೈಲಟ್ ಗಳು ಮಾಡಿದ್ದರು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಈ ವೇಳೆ ಟೇಕಾಫ್ ಆದ ನಂತರ, ಅವಳಿ ಇಂಜಿನ್ ಗಳಲ್ಲಿ ಬೆಂಕಿಯ ಜ್ವಾಲೆ ಕಾಣಿಸಿಕೊಂಡು ವಿಮಾನವು ಮೇಲೇರಲು ಅಸಮರ್ಥವಾಗುವಂತಹ ಸನ್ನಿವೇಶವನ್ನು ಸೃಷ್ಟಿಸಲು ಪೈಲಟ್ ಗಳು ಎಲೆಕ್ಟ್ರಿಕಲ್ ವೈಫಲ್ಯಗಳ ಅಣಕು ಪ್ರದರ್ಶನ ನಡೆಸಿದ್ದರು. ಆದರೆ, ಅವರು ಅದರಲ್ಲಿ ವಿಫಲಗೊಂಡಿದ್ದರು ಎನ್ನಲಾಗಿದೆ.
ವಿಮಾನದ ಬ್ಲಾಕ್ ಬಾಕ್ಸ್ ನಿಂದ ಈಗಾಗಲೇ ದತ್ತಾಂಶಗಳನ್ನು (ವಿಮಾನ ದತ್ತಾಂಶ ರೆಕಾರ್ಡರ್ ಗಳು ಹಾಗೂ ಕಾಕ್ ಪಿಟ್ ಧ್ವನಿ ರೆಕಾರ್ಡರ್ ಗಳು) ಡೌನ್ ಲೋಡ್ ಮಾಡಿರುವ ಅಪಘಾತದ ತನಿಖಾಧಿಕಾರಿಗಳು, 787 ವಿಮಾನದ ಇಂಧನ ಸ್ವಿಚ್ ಗಳ ಸ್ಥಿತಿಗತಿಗಳನ್ನೂ ಪರೀಕ್ಷಿಸಲಿದ್ದಾರೆ. ನಂತರ ಅವರು ಆ ದತ್ತಾಂಶಗಳನ್ನು ಪತ್ತೆಯಾಗಿರಬಹುದಾದ ಇಂಧನ ಸ್ವಿಚ್ ಗಳ ಅವಶೇಷಗಳೊಂದಿಗೆ ಅವನ್ನು ಹೋಲಿಕೆ ಮಾಡಲಿದ್ದಾರೆ. ಇದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ವಿಮಾನ ಮೇಲೇರಿದಾಗ ಕೂಡಲೇ ಅಥವಾ ಟೇಕಾಫ್ ಗಾಗಿ ಚಲಿಸುವಾಗಿನ ಮಹತ್ವದ ಘಟ್ಟದಲ್ಲಿ ಪೈಲಟ್ ಗಳೇನಾದರೂ ಆಕಸ್ಮಿಕವಾಗಿ ಇಂಧನ ಸ್ವಿಚ್ ಗಳನ್ನು ಆಫ್ ಮಾಡಿದ್ದಾರೆಯೇ ಎಂಬುದನ್ನು ನಿರ್ಧರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ.
ಅಣಕು ಸನ್ನಿವೇಶಗಳನ್ನು ನಿರ್ವಹಿಸುವಾಗ ನಿಖರವಾಗಿರುವುದನ್ನು ಖಾತರಿಗೊಳಿಸಿಕೊಳ್ಳಲು, AI-171 ವಿಮಾನದ ನಿಖರ ಟ್ರಿಮ್ ಶೀಟ್ ದತ್ತಾಂಶವನ್ನು ಪುನರಾವರ್ತಿಸಿದ್ದರು ಎನ್ನಲಾಗಿದೆ. ವಿಮಾನಗಳು ಟೇಕಾಫ್ ಆಗುವಾಗ ಹಾಗೂ ಭೂಸ್ಪರ್ಶ ಮಾಡುವಾಗ ಅವುಗಳ ಗುರುತ್ವಾಕರ್ಷಣೆ ಕೇಂದ್ರವು ಸುರಕ್ಷಿತವಾಗಿರುವುದನ್ನು ಖಾತರಿಪಡಿಸಿಕೊಳ್ಳಲು ಹಾಗೂ ವಿಮಾನದ ತೂಕ ಹಾಗೂ ಸಮತೋಲನವನ್ನು ಲೆಕ್ಕ ಮಾಡಲು ವಿಮಾನ ಯಾನ ಸೇವೆಯಲ್ಲಿ ಈ ಟ್ರಿಮ್ ಶೀಟ್ ಗಳನ್ನು ಬಳಸಲಾಗುತ್ತದೆ.
ಈ ತರಬೇತಿ ನಿರತ ಪೈಲಟ್ ಗಳು ಒಂದು ಇಂಜಿನ್ ವೈಫಲ್ಯದ ಅಣಕು ಪ್ರದರ್ಶನವನ್ನೂ ಮಾಡಿದ್ದು, ವಿಮಾನದ ಚೌಕಟ್ಟು ಕೆಳಗೆ ಕುಸಿಯಲೂ ಅವಕಾಶ ನೀಡಿದ್ದಾರೆ ಹಾಗೂ 787 ವಿಮಾನದ ತೂಗಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ.
ಸಾಮಾನ್ಯ ಟೇಕಾಫ್ ಗಳಿಗೆ ಅಸುರಕ್ಷಿತ ಹಾಗೂ ಅಸಮರ್ಪಕ ಎಂದೇ ಪರಿಗಣಿಸಲಾಗಿರುವ ಈ ಸಂಯೋಜನೆಯು ವಿಮಾನದ ತಳಭಾಗದಲ್ಲಿ ನಿಯೋಜಿಸಲಾಗಿರುವ ಈ ಭಾರಿ ತೂಕದ ಚೌಕಟ್ಟು ಸಾಮರ್ಥ್ಯ ಹೀನ ವಿಮಾನದ ಟೇಕಾಫ್ ಉತ್ಕಷ್ಕಕ್ಕೆ ಮೀಸಲಾಗಿದೆ. ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಅದು ಗಾಳಿಯಲ್ಲಿ ಸುಲಭವಾಗಿ ಚಲಿಸುವುದು ಹಾಗೂ ದಕ್ಷವಾಗಿ ಮೇಲೇರುವುದನ್ನು ಖಾತರಿಪಡಿಸಲು, ವಿಮಾನದ ಈ ಚೌಕಟ್ಟನ್ನು ಸಾಮಾನ್ಯವಾಗಿ ವಿಮಾನದ ಮೈಕಟ್ಟಿನಲ್ಲಿ ಹುದುಗಿಸಿರುತ್ತಾರೆ.
ಇದಲ್ಲದೆ, ಅಣಕು ಪ್ರದರ್ಶನದ ವೇಳೆ, ಅಸಮರ್ಪಕ ಟೇಕಾಫ್ ತೂಗಾಟ ಸಂಯೋಜನೆಯನ್ನೂ ಆಯ್ದುಕೊಳ್ಳಲಾಗಿದೆ. ಇದು 787 ವಿಮಾನವು ಒಂದೇ ಇಂಜಿನ್ ನಲ್ಲಿ ಮೇಲೇರುವುದನ್ನು ಮತ್ತಷ್ಟು ಸವಾಲನ್ನಾಗಿಸುತ್ತದೆ. ಟೇಕಾಫ್ ತೂಗಾಟವು ವಿಮಾನದ ರೆಕ್ಕೆಗಳ ಮೇಲೆ ಹೊಂದಾಣಿಕೆ ಮಾಡಬಹುದಾದ ಮೇಲ್ಮೈ ಆಗಿದ್ದು, ಇದರ ನೆರವಿನಿಂದ ವಿಮಾನವು ಟೇಕಾಫ್ ಆಗುವಾಗ ಅದರ ಮೇಲೇರುವ ಸಾಮರ್ಥ್ಯ ಅಧಿಕವಾಗುತ್ತದೆ ಅಥವಾ ವಿಮಾನದ ಹಾರಾಟ ಸಾಮರ್ಥ್ಯ ವೃದ್ಧಿಯಾಗುತ್ತದೆ.
ಇಲ್ಲಿ ವಿವರಿಸಲಾಗಿರುವ ಎಲ್ಲ ಸನ್ನಿವೇಶಗಳಲ್ಲಿ AI-171 ವಿಮಾನವು ಒಂದೇ ಇಂಜಿನ್ ನಲ್ಲಿ ಸುರಕ್ಷಿತ ಎತ್ತರವನ್ನು ಗಳಿಸುವ ಸಾಮರ್ಥ್ಯ ಹೊಂದಿತ್ತು. ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಬೋಯಿಂಗ್ 787-8ರ ಜನರಲ್ ಎಲೆಕ್ಟ್ರಿಕ್ ಜೆನ್ ಎಕ್ಸ್ 1ಬಿ67-ಕೆ ಟರ್ಬೊ ಫ್ಯಾನ್ ಗಳನ್ನು ತಲಾ 70,000 ಪೌಂಡ್ ನೂಕಾಟದ ಸಾಮರ್ಥ್ಯಕ್ಕೆ ಏರಿಕೆ ಮಾಡಲಾಗಿದೆ. ಇವು ಬೋಯಿಂಗ್ 787 ವರ್ಗದಲ್ಲಿನ ನಾಗರಿಕ ವಿಮಾನಗಳಿಗಾಗಿ ಅಭಿವೃದ್ಧಿ ಪಡಿಸಲಾಗಿರುವ ಅತ್ಯಂತ ಶಕ್ತಿಶಾಲಿ ಇಂಜಿನ್ ಗಳಾಗಿವೆ.
ಆದರೆ, ವ್ಯಾಪಕ ಊಹಾಪೋಹಕ್ಕೀಡಾಗಿರುವ ಅವಳಿ ಇಂಜಿನ್ ವೈಫಲ್ಯವು ಮಹಾ ದುರಂತವಾಗಿದೆ.
ಅಕ್ಟೋಬರ್ 2011ರಲ್ಲಿ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನವು ಸೇವೆಗೆ ಪದಾರ್ಪಣೆ ಮಾಡಿದಾಗಿನಿಂದ, AI-171 ವಿಮಾನ ಅಪಘಾತವು ಈ ವಿಮಾನದ ಸರಣಿಯಲ್ಲಿ ಸಂಭವಿಸಿರುವ ಮೊಟ್ಟಮೊದಲ ಅಪಘಾತವಾಗಿದೆ.
ಸೌಜನ್ಯ: ndtv.com







